ವಿಜಯ ಸಂಘರ್ಷ
ಭದ್ರಾವತಿ : ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ಪಾಲ್ಗೊಂಡಿದ್ದರ ಪರಿಶ್ರಮದ ಫಲವಾಗಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುವಂತಾಗಿದೆ. ಇಂತಹ ಮಹನೀಯರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದು ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಆರ್.ಪ್ರದೀಪ್ ಹೇಳಿದರು.
ಹಳೇನಗರದ ಕನಕಮಂಟಪ ಮೈದಾನದಲ್ಲಿಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹಲವಾರು ಸಮಸ್ಯೆಗಳು ಉಲ್ಬಣ ಗೊಂಡಿವೆ. ಮನುಷ್ಯರ ದುರಾಸೆಯ ಫಲವಾಗಿ ಪ್ರಕೃತಿ ನಾಶಗೊಳ್ಳುತ್ತಿದೆ. ಅದರ ವಿರುದ್ಧವಾಗಿ ನಾವುಗಳು ಸಾಗುತ್ತಿದ್ದೇವೆ. ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಈ ಬಾರಿ ಸಹ ಉತ್ತಮವಾಗಿ ಮಳೆಯಾಗುವ ಮೂಲಕ ನಮ್ಮೆಲ್ಲರ ಜೀವನದಿ ಭದ್ರೆ ಪೂರ್ಣಗೊಂಡಿದ್ದು, ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಶಾಸಕ ಬಿ ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರ ಮಾರ್ಗದಲ್ಲಿ ಇಂದಿನ ಯುವಕರು ನಡೆಯುವಂತಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿದರು. ತಾ ಪಂ ಕಾರ್ಯನಿರ್ವ ಹಣಾಧಿಕಾರಿ ರಮೇಶ್, ಪೌರಾಯುಕ್ತ ಕೆ. ಪರಮೇಶ್, ಬಿಇಓ ಟಿ.ಎನ್ ಸೋಮಶೇಖರಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊರೋನಾ ಸಂದರ್ಭದಲ್ಲಿ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿರುವ ತರುಣ ಭಾರತಿ ವಿದ್ಯಾಸಂಸ್ಥೆ ಕಾರ್ಯ ದರ್ಶಿ ಡಾ.ಎಂ.ಎಚ್ ವಿದ್ಯಾಶಂಕರ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನೀಲೇಶ್ರಾಜ್ ಇನ್ನಿತರರನ್ನು ಸನ್ಮಾನಿಸಿ ಗೌರವಿಸ ಲಾಯಿತು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795