ಅಶ್ಲೀಲ ನೃತ್ಯ ಆರ್ಕೆಸ್ಟ್ರಾಗಳ ವಿರುದ್ಧ ಕ್ರಮ ಕೈಗೊಳ್ಳಿ : ವಾದ್ಯಗೋಷ್ಠಿ ಕಲಾವಿದರ ಮನವಿ

 

ವಿಜಯ ಸಂಘರ್ಷ



ಭದ್ರಾವತಿ: ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸುವ ವಾದ್ಯಗೋಷ್ಠಿ ಕಲಾತಂಡ(ಆರ್ಕೆಸ್ಟ್ರಾ)ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ವಾದ್ಯಗೋಷ್ಠಿ ಕಲಾವಿದರು ಹಾಗು ದಲಿತ ಸಂಘರ್ಷ ಸಮಿತಿಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗು ಕಲಾವಿದರು ಮಾತನಾಡಿ, ನಗರದ ಬಿ. ಆರ್. ಹರೀಶ್ ಮಾಲೀಕತ್ವದ ಸೋನಿ ಮೆಲೋಡಿ ವಾದ್ಯ ಗೋಷ್ಠಿ ತಂಡ ಇತ್ತೀಚೆಗೆ ತುರುವೇಕೆರೆ ತಾಲೂಕಿನ ಗ್ರಾಮವೊಂದರಲ್ಲಿ ಆಯೋಜಿಸ ಲಾಗಿದ್ದ ರಸಮಂಜರಿ ಕಾರ್ಯಕ್ರಮ ದಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಂಡು ತುಂಡು ಉಡುಗೆಯ ಅಶ್ಲೀಲ ನೃತ್ಯ ಪ್ರದರ್ಶನ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಾಕವಾಗಿ ಪ್ರಸಾರಗೊಳ್ಳುವ ಮೂಲಕ ಗೌರವಯುತವಾಗಿ ಗುರುತಿಸಿ ಕೊಂಡಿರುವ ಕಲಾವಿದರಿಗೆ ಮಸಿ ಬಳಿದಂತಾಗಿದ್ದು, ಕಲಾವಿದರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಹೆಚ್ಚಿನ ನೋವುಂಟು ಮಾಡಿದೆ. ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕುತ್ತಿರುವ ಬಹಳಷ್ಟು ಕಲಾವಿದ ರಿಗೆ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-19 ರ ಹಿನ್ನಲೆಯಲ್ಲಿ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾತಂಡಗಳಿಗೆ ಬೇಡಿಕೆ ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಅಳಲು ತೋರ್ಪಡಿಸಿಕೊಂಡರು.

 ಅಶ್ಲೀಲ ನೃತ್ಯ ಮಾಡಿಸುವ ವಾದ್ಯಗೋಷ್ಠಿ ಕಲಾ ತಂಡಗಳನ್ನು ತಕ್ಷಣ ರದ್ದುಗೊಳಿಸಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸುವ ಜೊತೆಗೆ ರಾಜ್ಯದಲ್ಲಿರುವ ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಪ್ರತಿವರ್ಷ ಸಾಲಸೌಲಭ್ಯ ಕಲ್ಪಿಸಿಕೊಡಬೇಕು. ಹಿರಿಯ ಕಲಾವಿದರಿಗೆ ಸಮರ್ಪಕವಾಗಿ ಮಾಸಾಶನ ವಿತರಿಸಬೇಕು ಮತ್ತು ನಿರ್ಗತಿಕ ಕಲಾವಿದರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ವಾದ್ಯಗೋಷ್ಠಿ ಕಲಾವಿದರಾದ ಶಾಲಿನಿ, ಬಿ.ಆರ್ ಗೋಪಾಲ್, ವಿಜಯ್ ದಯಾಕರ್, ನೂರುಲ್ಲಾ, ಎ. ರಾಜು, ವೆಂಕಟೇಶ್, ಕಣ್ಣಪ್ಪ ಮತ್ತು ದಾಮೋಜಿ, ದಲಿತ ಸಂಘರ್ಷ ಸಮಿತಿ  ಕೆ. ರಂಗನಾಥ್, ಸುರೇಶ್, ಈಶ್ವರಪ್ಪ, ಕುಪೇಂದ್ರಪ್ಪ, ಪಳನಿರಾಜ್, ಡಿ.ಜೆ ಪ್ರಭು, ಮೋಸಸ್, ದೀಪು, ನೂರುಲ್ಲಾ ಖಾನ್, ಶ್ರಮಿಕ್, ಮಾರ್ಟಿಸ್, ಶೃತಿ ಮೇರಿ ಮತ್ತಿತರರು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು