ಟಿಕಾಯತ್ ಮೇಲಿನ ಹಲ್ಲೆ ರಾಜ್ಯಕ್ಕೆ ಅವಮಾನ: ಬಿ.ಆರ್. ಜಯಂತ್

 


ವಿಜಯಸಂಘರ್ಷ/ಸಾಗರ


ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕೆಲವರು ಹಲ್ಲೆ ನಡೆಸಿ ಅವರ ಮುಖಕ್ಕೆ ಮಸಿ ಬಳಿದಿರುವುದು ನಮ್ಮ ನಡುವೆ ಇರುವ ಅಸುರಕ್ಷತೆಯ ಸಂಕೇತ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇಡೀ ದೇಶವೇ ತಿರುಗಿ ನೋಡುವಂತಹ ಚಳವಳಿಯನ್ನು ಸಂಘಟಿಸಿದ ಟಿಕಾಯತ್ ಅವರ ಮೇಲೆ ಕರ್ನಾಟಕದಲ್ಲಿ ಹಲ್ಲೆ ನಡೆದಿರುವುದು ರಾಜ್ಯಕ್ಕೆ ಅವಮಾನ ತರುವ ಸಂಗತಿ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಜನರು ನಡೆಸಿರುವ ಕೃತ್ಯ ಇದಾಗಿದೆ. ಸರ್ಕಾರ ಇಂತಹವರ ರಕ್ಷಣೆಗೆ ನಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ಸಾಗರ ಕ್ಷೇತ್ರದಲ್ಲಿ ಈಚಿನ ದಿನಗಳಲ್ಲಿ ಹೊಡೆದಾಟದ ಪ್ರಕರಣಗಳು ಹೆಚ್ಚುತ್ತಿವೆ. ಶಾಸಕ ಸ್ಥಾನದಲ್ಲಿರುವವ ರು ಇಂತಹ ಕೃತ್ಯಗಳಲ್ಲಿ ತೊಡಗಿರುವ ಎರಡು ಗುಂಪುಗಳನ್ನು ಕರೆದು ಮಾತು ಕತೆ ನಡೆಸಿ ವಾತಾವರಣವನ್ನು ತಿಳಿ ಗೊಳಿಸಬೇಕು. ಇಲ್ಲದಿದ್ದರೆ ಕ್ಷೇತ್ರದಲ್ಲಿ ವೈಷಮ್ಯದ ವಾತಾವರಣ ಮತ್ತಷ್ಟು ಹೆಚ್ಚುತ್ತದೆ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್. ಸುರೇಶ್ ಬಾಬು, 'ಕಳೆದ ಶನಿವಾರ ಪ್ರಗತಿ ಶಾಲೆ ಮೈದಾನದಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಸ್ಥಳದಲ್ಲಿ ಇಲ್ಲದ ವ್ಯಕ್ತಿಗಳ ಹೆಸರನ್ನು ಕೊಲೆ ಯತ್ನ ಪ್ರಕರಣದಲ್ಲಿ ಸೇರಿಸಲಾಗಿದೆ. ಪೊಲೀಸರು ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ' ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, 'ಕ್ಷೇತ್ರದಲ್ಲಿ ಭಯದ ವಾತಾವರಣ ಮೂಡುವಂತಾ ಗಲು ಆಡಳಿತ ಪಕ್ಷದ ಕುಮ್ಮಕ್ಕು ಕಾರಣ. ಅಧಿಕಾರಿಗಳು ಸಮರ್ಪಕ ವಾಗಿ ಕರ್ತವ್ಯ ನಿರ್ವಹಿಸಿದ್ದರೆ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ' ಎಂದರು. ಕಾಂಗ್ರೆಸ್‌ನ ಪ್ರಮುಖರಾದ ಭರ್ಮಪ್ಪ, ಮಹಾಬಲ ಕೌತಿ, ಸದ್ದಾಂ, ಡಿ. ದಿನೇಶ್ ಇದ್ದರು.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು