ಅಮೃತ ಮಹೋತ್ಸವದ ಸಂಭ್ರಮದಲ್ಲಿ ಕಣ್ಣೂರು ಸರ್ಕಾರಿ ಶಾಲೆ

ವಿಜಯ ಸಂಘರ್ಷ
ಸಾಗರ: (ಆನಂದಪುರ) ಜಾನಪದ ಸೊಗಡಿನ ಗಂಡು ಕಲೆ ಡೊಳ್ಳು ಕುಣಿತದ ಮೂಲಕ ವಿಶ್ವ ಪ್ರಸಿದ್ಧಿಯಾದ ಇಲ್ಲಿಗೆ ಸಮೀಪದ ಕಣ್ಣೂರು ಗ್ರಾಮದ ಸರ್ಕಾರಿ ಶಾಲೆಯು ಪುಟ್ಟ ಗುಡಿಸಲಿನಲ್ಲಿ ಆರಂಭವಾಗಿ ಇಂದು 75 ವಸಂತಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.

ಗ್ರಾಮದ ತುಂಬೆಲ್ಲಾ ಹಬ್ಬದ ಸಡಗರ ಮನೆ ಮಾಡಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ಭಾರತೀಯ ಸೇನೆ, ಶಿಕ್ಷಣ ಇಲಾಖೆ, ವೈದ್ಯಕೀಯ, ಕೃಷಿ, ಸಾಮಾಜಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಸರುಗಳಿಸಿದ್ದಾರೆ.
ಕಣ್ಣೂರಿನಲ್ಲಿ ಸಂಪೂರ್ಣವಾಗಿ ಕೃಷಿಯನ್ನೇ ಅಧರಿಸಿ ಬದುಕನ್ನು ನಿರ್ವಹಿಸುತ್ತಿದ್ದ ಕಾಲ ಅದಾಗಿತ್ತು ಮಹಾರಾಜರ ಕಾಲದಲ್ಲಿ ಬೆರಳಿಕೆಯಷ್ಟಿನ ಸ್ಥಿತಿವಂತರು ಮಾತ್ರ ಅಗ್ರಹಾರಗಳಲ್ಲಿ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇನ್ನುಳಿದಂತೆ ಬಹುಪಾಲು ಮಂದಿ ಅನಕ್ಷರಸ್ಥರಾಗಿಯೇ ಉಳಿಯು ವಂತಾಗಿತ್ತು. ಇಲ್ಲಿನ ಕೆಲ ಹಿರಿಯರು ಸಮಾಲೋಚಿಸಿ ನಮ್ಮ ಮುಂದಿನ ಪೀಳಿಗೆಯವರು ವಿದ್ಯಾವಂತರಾಗಲೇಬೇಕು ಎಂಬ ಮಹತ್ವಾಕಾಂಕ್ಷೆಯಿoದ ಬೇರೆಲ್ಲೆಡೆ ಹುಡುಕಾಡಿ ಗುರುಗಳನ್ನು ಕರೆತಂದು ತಮ್ಮ ಮನೆಗಳಲ್ಲಿ ಅವರಿಗೆ ಅಂದಿನ ಕಾಲದ ಅಗತ್ಯತೆಗಳನ್ನು ಪೂರೈಸಿ ತಮ್ಮ ಮನೆಗಳಲ್ಲಿಯೇ ತಂಗಿಸಿಕೊoಡು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನಾಂದಿ ಹಾಡಿದರು.

 ಶಿಕ್ಷಣ ಆಸಕ್ತರ ಸಂಖ್ಯೆ ಹೆಚ್ಚಾದ ಕಾರಣ ನಂತರ ಪುಟ್ಟ ಹುಲ್ಲು ಹಾಸಿನ ಗುಡಿಸಲಿನ್ನು ಸ್ವತ: ಗ್ರಾಮಸ್ಥರೆಲ್ಲಾ ನಿರ್ಮಿಸಿಕೊಂಡರು. ಗ್ರಾಮದಲ್ಲಿ ಜನಸಂಖ್ಯೆ ವೃದ್ಧಿಯಾದಂತೆ ಪಾಠ ಮಾಡುವ ಸ್ಥಳವನ್ನು ದೇವಸ್ಥಾನದ ಆವರಣಕ್ಕೆ ಸ್ಥಳಾಂತರಿಸಿ ಶಾಲಾ ಶಿಕ್ಷಣಕ್ಕೆ ಬುನಾದಿ ಹಾಕಿದರು. ಇದೇ ಸ್ಥಳದಲ್ಲಿ ಕೆಲ ವರ್ಷಗಳ ಕಾಲ ವಿದ್ಯಾರ್ಜನೆ ನಡೆಯಿತು.
ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಸರ್ಕಾರವು 1948 ರಂದು ಏಕೋಪಾಧ್ಯಾಯ ಶಾಲೆಯನ್ನು ಆರಂಭಿಸಿತು. ಅಂದಿನ ದಿನಗಳಲ್ಲಿಯೇ 32 ಸಂಖ್ಯೆಯಷ್ಟು ಮಕ್ಕಳು ದಾಖಲಾದರು. 4 ನೇ ತರಗತಿಯವರೆಗೆ ಮಾತ್ರ ಇದ್ದ ಶಾಲೆಗೆ 1984 ರ ಸಾಲಿನಿಂದ 6 ನೇತರಗತಿಯವರೆಗೆ ವಿಸ್ತರಿಸಿತು.

ಅಂದಿನಿoದ ಶಾಲೆಯ ಅಭಿವೃದ್ಧಿ ಆರಂಭವಾಗಿ 2006 ರಲ್ಲಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯಾಗಿ ಮಾರ್ಪಟ್ಟಿತು. ಹಿಂದೆ ನಿರ್ಮಿಸಿದ್ದರಲ್ಲಿಯೇ ಇಂದಿಗೂ ಶಾಲಾ ಚಟುವಟಿಕೆಗಳು ನಡೆಯುತ್ತಿದ್ದು, ನೂತನ 2 ಹೆಚ್ಚುವರಿ ಕೊಠಡಿಗಳು ಅಮೃತ ಮಹೋತ್ಸವದ ದಿನ ಉದ್ಘಾಟನೆಗೊಳ್ಳಲಿದೆ. ಪ್ರಸ್ತುತ 62 ಸಂಖ್ಯೆಯ ಮಕ್ಕಳನ್ನು ಹೊಂದಿರುವ ಶಾಲೆಯಲ್ಲಿ ಕ್ರಿಯಾಶೀಲ ಮುಖ್ಯೋಪಾಧ್ಯಾಯರೊಂದಿಗೆ 3 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೇವಲ ಸರ್ಕಾರ ಮಾತ್ರವಲ್ಲ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಸಹಾಯ ಹಸ್ತವನ್ನು ಇನ್ನಷ್ಟು ಚಾಚಿದರೆ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬಹುದು ಎನ್ನುತ್ತಾರೆ ಕಣ್ಣೂರು ಗ್ರಾಮಸ್ಥರು.
ಫೆ,10ರಂದು ಅಮೃತ ಮಹೋತ್ಸವದ ಉದ್ಘಾಟನೆ ಹಾಗೂ ಫೆ.11ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವರು, ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಜಿ.ಪಂ. ಹಾಗೂ ತಾ.ಪಂ.ಮಾಜಿ ಸದಸ್ಯರು, ಇಲಾಖೆಯ ಅಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳು, ಆಗಮಿಸಲಿದ್ದಾರೆ. 

ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನೂ ಸಹ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
 “ಪರಿಣಾಮಕಾರಿ ಶಿಕ್ಷಣ ಒದಗಿಸಲು ಅಗತ್ಯ ಶಿಕ್ಷಕರ ಸಂಖ್ಯೆ ವೃದ್ಧಿಸುವುದರ ಜೊತೆಗೆ ಕಲಿಕೆಗೆ ಪೂರಕವಾಗುವಂತಹ ಸ್ಮಾರ್ಟ್ ಕ್ಲಾಸ್ ನ ಅಗತ್ಯತೆಯಿದೆ. ಗ್ರಾಮೀಣ ಮಕ್ಕಳಲ್ಲಿರುವ ಕ್ರೀಡಾಕೌಶಲ್ಯದ ಅನಾವರಣದ ಅವಶ್ಯಕತೆಯಿದ್ದು ಕ್ರೀಡೋಪಕರಣಗಳು ಹಾಗೂ ಆಟದ ಮೈದಾನದ ವ್ಯವಸ್ಥೆಯನ್ನು ತುರ್ತಾಗಿ ಕಲ್ಪಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಶಿಕ್ಷಣಕ್ಕೆ ವಿಶೇಷ ಗಮನಹರಿಸಬೇಕಿದೆ ಆಗ ಮಾತ್ರ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ನಮ್ಮ ಸರ್ಕಾರಿ ಶಾಲೆ ಉಳಿದುಕೊಳ್ಳಲು ಸಹಕಾರಿಯಾಗಲಿದೆ. ”   
ರವಿಕುಮಾರ್ ಎಂ ಎಂ ಹಿರಿಯ ವಿದ್ಯಾರ್ಥಿ, ಶಿಕ್ಷಕರು

(ವರದಿ ಚಂದ್ರಶೇಖರ್ ಎಸ್ ಡಿ ಆನಂದಪುರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು