ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ರಾಜ್ಯದಲ್ಲಿ ವಕ್ಸ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಸ್ ಕಾಯ್ದೆ ಮುಸ್ಲಿಂ ತುಷ್ಠಿ ಕರಣಕ್ಕಾಗಿ. ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಕೇಂದ್ರ ಸರ್ಕಾರ ತಕ್ಷಣ ಹೊಸ ವಕ್ಸ್ ಕಾಯ್ದೆ ಜಾರಿಗೊಳಿಸು ವಂತೆ ಬಿಜೆಪಿ ಪ್ರಕೋಷ್ಟಗಳ ರಾಜ್ಯ ನಂಯೋಜಕ ಎಸ್. ದತ್ತಾತ್ರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಕ್ಸ್ ಬೋರ್ಡ್ ರಾಜ್ಯ ಸರ್ಕಾರದ ಭಾಗವಾಗಿ ದ್ದರೂ ಸಹ ಸರ್ಕಾರದ ಹಿಡಿತದಲ್ಲಿ ಎಷ್ಟರ ಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮೂಡಿಸಿದೆ. ರಾಜ್ಯದ ಅಲ್ಪಸಂಖ್ಯಾತರ ಹಾಗೂ ವಕ್ಸ್ ಖಾತೆ ಸಚಿವ ಜಮೀರ್ ಅಹಮದ್‌ಖಾನ್‌ರವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಸ್ ಪ್ರಗತಿ ಪರಿಶೀಲನೆ ಹಾಗೂ ವಕ್ಸ್ ಆದಾಲತ್‌ಗಳನ್ನು ನಡೆಸಿ ಸರ್ಕಾರದ 1974 ರ ಗೆಜೆಟ್ ಆಗಿರೋ ಪ್ರಕಾರ ರೈತರ ಕೃಷಿ ಜಮೀನುಗಳನ್ನು ಮಠಮಂದಿರಗಳ ಆಸ್ತಿಗಳನ್ನೂ ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಸ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ಇಂಡೀಕರಿಸಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 1974 ರ ಸರ್ಕಾರದ ಗೆಜೆಟ್ ರಾಜ್ಯದಲ್ಲಿ ಉಂಟಾಗಿರುವ ಈ ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. 50 ವರ್ಷದವರೆಗೂ ಇಂಡೀಕರಣ ಮಾಡದ ಇಲಾಖೆಗೆ ಈ ತಕ್ಷಣ ಇಂಡೀಕರಿಸಿಕೊಳ್ಳುವ ಹಿಂದಿನ ಉದ್ದೇಶ ವೇನು ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ವಕ್ಸ್ ಕಾಯ್ದೆಯ ಕರಾಳತೆ ಅರಿತು ಹೊಸ ವಕ್ಸ್ ಕಾಯ್ದೆ ರಚಿಸುವ ಕ್ರಮಕ್ಕೆ ಮುಂದಾಗಿ, ಕರಡು ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಆ ಕಾಯ್ದೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಸಂಸತ್ತಿನ ಸಮಿತಿಗೆ ಒಪ್ಪಿಸಲಾಗಿದೆ. ಬಹುತೇಕ ಮುಂದಿನ ಅಧಿವೇಶನದಲ್ಲಿ ಮಂಜೂರಾಗ ಬಹುದು ಎನ್ನುವ ಆತಂಕದೊಂದಿಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಖಾನ್ ಅವರು ಎಲ್ಲ ಜಿಲ್ಲೆಗಳಿಗೂ ಹೋಗಿ, ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣ ಮಾಡಿ ರೈತರ ಜಮೀನುಗಳನ್ನು ಮಠ ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ವಕ್ಸ್ ಆಸ್ತಿಯಾಗಿ ದಾಖಲೆಯನ್ನು ಸೃಷ್ಟಿಸುವ ಹುನ್ನಾರ ಮಾಡಿದ್ದಾರೆಂದು ಆರೋಪಿಸಿದರು.
ಪ್ರಸ್ತುತ ರೈತರು, ಮಠಗಳ ಮಠಾಧೀಶರು, ಮಂದಿರದ ಮುಖ್ಯಸ್ಥರು ಆತಂಕಗೊಂಡಿ ದ್ದಾರೆ. ಕಂದಾಯ ದಾಖಲೆಗಳಲ್ಲಿ ತಮ್ಮ ಮಾಲೀಕತ್ವವದ ಆಸ್ತಿಗಳು ವಕ್ಸ್ ಪಾಲಾಗಿ ವೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಂದು ಕಂದಾಯ ದಾಖಲೆಗಳಲ್ಲಿ ರೈತರ ಹೆಸರು ಗಳನ್ನು ತೆಗೆದು ಹಾಕದೆ 1974 ರ ಗೆಜೆಟ್ ಪ್ರಕಾರ ಇದೀಗ 50 ವರ್ಷಗಳ ನಂತರ ಇಂಡೀಕರಿಸಲು ಸೂಚನೆ ನೀಡಿದ್ದರ ಪರಿಣಾಮ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೆಲವು ಜನರ ಆಸ್ತಿಗಳು 1974 ರ ವಕ್ಸ್ ಗೆಜೆಟ್ ಪಟ್ಟಿಯಲ್ಲಿವೆ. ಆದರೆ ಯಾವುದೇ ಕಂದಾಯ ದಾಖಲೆಗಳಲ್ಲಿ ನಮೂದಾಗಿಲ್ಲ ಕೆಲವು ಜನರ ಅಸ್ತಿ 1974 ರ ವಕ್ಸ್ ಗೆಜೆಟ್ ಪಟ್ಟಿಯಲ್ಲಿವೆ. ಅವುಗಳನ್ನು ಆರ್‌ಟಿಸಿ ಕಲಂ 09 ರಲ್ಲಿ ವಕ್ಸ್ ಹೆಸರು ನಮೂದಿಸಲಾಗಿದೆ. ಕೆಲವೊಬ್ಬರ ಆಸ್ತಿ 1974 ರ ವಕ್ಸ್ ಪಟ್ಟಿಯಲ್ಲಿಯೂ ಇದೆ. ಆರ್‌ಟಿಸಿ ಕಲಂ 11 ರಲ್ಲಿ ವಕ್ಸ್ ಹೆಸರು ನಮೂದಿಸಲಾಗಿದೆ. ಇನ್ನೊಂದಷ್ಟು ಜನ ರೈತರಿಗೆ 1974ರ ವಕ್ಸ್ ಪಟ್ಟಿಯಲ್ಲಿದೆ ಎಂದು ತಿಳಿಸಿ ನೋಟಿಸ್ ನೀಡಲಾಗಿದೆ. ಹೀಗೆ ರೈತರು ವಿಭಿನ್ನ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ; ಅಷ್ಟೇ ಅಲ್ಲದೆ ಆಸ್ತಿ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ ಎಂದರು.
ಇದೀಗ ರಾಜ್ಯ ಸರ್ಕಾರ ನೋಟಿಸ್ ಹಿಂಪಡೆಯುವುದಾಗಿ ಹೇಳಿದರೂ ಕೂಡ ಆರ್‌ಟಿಸಿಯ ಕಲಂ 11 ರಲ್ಲಿ ವಕ್ಸ್ ಹೆಸರು ದಾಖಲಾಗಿರುವುದನ್ನು ತೆಗೆಯುವುದಾಗಿ ಹೇಳಿದರು ಕೂಡ ಕೃಷಿಯೇತರ ಭೂಮಿಯ (ಎನ್‌ಎ) ರೈತರ ಸಮಸ್ಯೆಯು ಪರಿಹಾರವಾಗುವುದಿಲ್ಲ. ವಕ್ಸ್ ಬೋರ್ಡ್ ಬರಿ ಅಲ್ಪಸಂಖ್ಯಾತರ ನಿರ್ದಿಷ್ಟ ಕೋಮಿನವರಿಗೆ ಸೇರಿದ ಸಂಸ್ಥೆಯಾಗಿರುವುದರಿಂದ, ಬೇರೆ ಬೇರೆ ಸರ್ಕಾರಗಳ ಸಂದರ್ಭದಲ್ಲಿ ಕೂಡ ಚಿತಾವಣೆ ಮಾಡಿರುವ ಸಾಧ್ಯತೆ ಇದೆ. ಬಿಜೆಪಿ ಸೇರಿದಂತೆ ಯಾವುದೇ ಸರ್ಕಾರದ ಸಂದರ್ಭದಲ್ಲಿ ಚಿತಾವಣೆ ನಡೆದಿದ್ದರೂ, ರೈತರ ಆಸ್ತಿ ಮುಟ್ಟುವ ಪ್ರಯತ್ನ ನಡೆದಿದ್ದರೂ ಅದನ್ನು ನಾವು ಖಂಡಿಸುತ್ತೇವೆ. ಸರಿ ಮಾಡುವ ಗುರುತರ ಜವಾಬ್ದಾರಿ ಈಗ ಆಡಳಿತದಲ್ಲಿರುವ ಸರ್ಕಾರಕ್ಕೆ ಇರುತ್ತದೆ ಎಂದರು.
ಒಂದು ವೇಳೆ ಕೇಂದ್ರದ ನೂತನ ವಕ್ಸ್ ಕಾಯ್ದೆ ಜಾರಿಗೆ ಬಂದರೆ ಅದು ಪೂರ್ವಾನ್ವಯ ಜಾರಿ ಆಗುವುದಿಲ್ಲ, ಅದು ಭವಿಷ್ಯಾನ್ವಯವಾಗಿ ಜಾರಿ ಆಗುತ್ತದೆ. ಹೀಗಾಗಿ ಆ ಕಾಯ್ದೆ ಬರುವುದರ ಒಳಗಾಗಿ ಹಿಂದೂಗಳ, ರೈತರ ಆಸ್ತಿಗಳನ್ನು ವಕ್ಸ್ ಪರವಾದ ದಾಖಲೆ ಸೃಷ್ಟಿಸುವ ಅಪರಾಧಿಕ ಕೃತ್ಯ ಎಸಗಲಾಗಿದೆ. ಇದೀಗ ರೈತರಿಗೆ ಕೊಟ್ಟಿರುವ ನೋಟಿನ್‌ಗಳು, ಇಂಡೀಕರಣ ಮಾಡಿರುವ 11ನೇ ಕಾಲಂ, ಇಂಡೀಕರಣ ಮಾಡಿ ತೆಗೆದು ಹಾಕಿರುವ ದಾಖಲೆಗಳು, 9 ನೇ ಕಾಲಂನಲ್ಲಿ ಸೇರಿಸಿರುವ ದಾಖಲೆಗಳು ಈ ಎಲ್ಲ ಕಂದಾಯ ದಾಖಲೆಗಳಲ್ಲಿ ಆಗಿರುವ ವಹಿವಾಟುಗಳು ಹೊಸ ಕಾಯ್ದೆ ಬರುವ ಮೊದಲು ಸೃಷ್ಟಿಸಿರುವ ವಕ್ಸ್ ಪರ ಸಾಕ್ಷಿ ದಾಖಲೆಗಳಾಗುತ್ತವೆ ರೈತರಿಗೆ, ಹಿಂದೂ ಧರ್ಮದ ಮಠ-ಮಾನ್ಯಗಳಿಗೆ, ಸರ್ಕಾರಿ ಅಸ್ತಿಗಳಿಗೆ ಕಂಟಕಪ್ರಾಯವಾಗಿದೆ. ಕಾನೂನಾತ್ಮಕ ಹೋರಾಟಗಳಲ್ಲಿ ಮಾರಣಾಂತಿಕ ಸಾಕ್ಷಿಗಳಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕಳ್ಳಾಟ ಮಾಡಬಾರದು. ರೈತರಿಗೆ ಹಿಂದುಗಳಿಗೆ ದ್ರೋಹ ಬಗೆಯಬಾರದು. ಯಾವ ರೈತರು ಕೃಷಿ ಜಮೀನನ್ನು ಸಾಗುವಳಿ ಮಾಡುತ್ತಿದ್ದಾರೋ, ಯಾವ ಮಠ ಮಂದಿರಗಳಲ್ಲಿ ಹತ್ತು ಹಲವು ವರ್ಷಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿವೆಯೋ, ಅವೆಲ್ಲವುಗಳನ್ನು ವಕ್ಸ್ ಪಾಲಾಗಲು ಬಿಜೆಪಿ ಬಿಜೆಪಿ ಬಿಡುವುದಿಲ್ಲ. ಆಸ್ತಿ ಮಾಲೀಕರಿಗೆ ಯಾವ ಮಾಹಿತಿಯೂ ಕೊಡದೆ ಗೊತ್ತೇ ಇರದಂತೆ ಸೃಷ್ಟಿ ಮಾಡಿಕೊಂಡಿರುವ ವಕ್ಸ್ ಗೆಜೆಟ್ ಅಧಿಸೂಚನೆಗಳನ್ನು ರದ್ದುಗೊಳಿಸುವ ಕ್ರಮ ರಾಜ್ಯ ಸರ್ಕಾರ ತಕ್ಷಣ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಎಂ.ಮಂಜುನಾಥ್, ಎಚ್. ತೀರ್ಥಯ್ಯ, ಬಿ.ಕೆ. ಶ್ರೀನಾಥ್, ಅಣ್ಣಪ್ಪ, ಚನ್ನೆಶ್, ರಾಜಶೇಖರ್ ಉಪ್ಪಾರ, ಅವಿನಾಶ್, ಪಿ.ಜಿ. ರಾಮಲಿಂಗಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.