ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಕಳೆದ 15 ವರ್ಷಗಳ ಹಿಂದೆ ಪಟಾಕಿ ಸಿಡಿಮದ್ದು ಪ್ರದರ್ಶನದ ವೇಳೆ ಅವಘಡ ಸಂಭವಿಸಿ ವೀಕ್ಷಿಸಲು ಬಂದಿದ್ದ ಓರ್ವ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 12 ಆರೋಪಿಗಳಿಗೆ ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಹುಡ್ಕೋ ಕಾಲೋನಿ ನಿವಾಸಿ ಅನಿಲ್ ಕುಮಾರ್ (39), ಜನ್ನಾಪುರ ನಿವಾಸಿ ಹರೀಶ್(36), ಕೇರಳ ಕ್ಯಾಲಿಕಟ್, ವಾದಗರ್ ನಿವಾಸಿ ರಾಜೀವ್(41), ನಗರದ ತರೀಕೆರೆ ರಸ್ತೆ, ಎಂ.ಎಂ ಕಾಂಪೌಂಡ್ ನಿವಾಸಿ ಬಾಬು(45), ನ್ಯೂಟೌನ್ ನಿವಾಸಿ ಬಾಲನ್ ಪಿಲೈ(31) ಮೃತಪಟ್ಟಿದ್ದಾರೆ, ನ್ಯೂ ಕಾಲೋನಿ ನಿವಾಸಿ ಶಾಮಕುಮಾರ್(33), ಹೊಸಮನೆ ಹನುಮಂತನಗರ ನಿವಾಸಿ ಪ್ರಭಾಕರ್ (50), ಮೂಲೆಕಟ್ಟೆ ನಿವಾಸಿ ರಾಧಾಕೃಷ್ಣ (37), ಕಾಗದನಗರ ನಿವಾಸಿ ವಿಜಯನ್(42), ಭದ್ರಾ ಕಾಲೋನಿ ನಿವಾಸಿ ರಾಜಶೇಖರ್(42), ಜನ್ನಾಪುರ ರಾಜಪ್ಪ ಬಡಾವಣೆ ನಿವಾಸಿ ಪ್ರಶಾಂತ್(38) ಮತ್ತು ಹೊಸಮನೆ ವಿಜಯನಗರ ನಿವಾಸಿ ಕುಮಾರ್(40) ಅವರಿಗೆ ತಲಾ 16,250 ರೂ. ದಂಡ ವಿಧಿಸಲಾಗಿದ್ದು, ಘಟನೆಯಲ್ಲಿ ಮೃತಪಟ್ಟಿರುವ ದಿಲೀಪ್ ಕುಟುಂಬಕ್ಕೆ 1 ಲಕ್ಷ ರೂ.ಹಾಗು ಗಾಯ ಗೊಂಡಿದ್ದ ಆರ್. ಕಿರಣ್‌ಗೆ 50 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.
ಘಟನೆ ವಿವರ :
ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ದೀಪೋತ್ಸವದ ವೇಳೆ ಪ್ರತಿ ವರ್ಷ ಸಿಡಿಮದ್ದು ಪ್ರದರ್ಶನ ಆಯೋಜಿಸಿ ಕೊಂಡು ಬರಲಾಗುತ್ತಿತ್ತು. 31 ಡಿಸೆಂಬರ್ 2011ರಂದು ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಿಡಿಮದ್ದು ಪ್ರದರ್ಶನದ ವೇಳೆ ಯಾವುದೇ ಪರವಾನಗಿ ಹೊಂದಿಲ್ಲದೆ ಹಾಗು ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಕಬ್ಬಿಣದ ಡ್ರಮ್‌ನಲ್ಲಿ ಪಟಾಕಿ ತುಂಬಿ ಸಿಡಿಸಿದ ಪರಿಣಾಮ ಪ್ರದರ್ಶನ ವೀಕ್ಷಿಸಲು ಬಂದಿದ್ದ ದಿಲೀಪ್‌ಗೆ ಡಮ್ ಸಿಡಿದ ಪರಿಣಾಮ ಕಬ್ಬಿಣದ ಚೂರು ತಗುಲಿ ಗಾಯಗೊಂಡಿದ್ದು, ನಂತರ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿಲೀಪ್ ಮೃತ ಪಟ್ಟಿದ್ದು, ಆರ್.ಕಿರಣ್ ಗಾಯಗೊಂಡು ಚೇತರಿಸಿಗೊಂಡಿ ದ್ದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ಠಾಣೆಯ ಉಪ ನಿರೀಕ್ಷಕ ಎಂ.ಎಂ ಭರತ್ ನ್ಯಾಯಾಲಯಕ್ಕೆ ದೋಷಾ ರೋಪಣಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್‌ರವರು ದಂಡ ವಿಧಿಸಿ, ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
Tags
ಭದ್ರಾವತಿ ಸುದ್ದಿ