ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ದಾನವಾಡಿ ಸರ್ವೆ ನಂ : 29 ರಲ್ಲಿ ಹುಲ್ಲು ಬನ್ನಿ ಹರಾಜು ಜಮೀನಿನಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಅರಕೆರೆ ಗ್ರಾಮದ ಬಡ ರೈತರನ್ನು ಸುಳ್ಳು ಮೊಕದ್ದಮೆ ಹೂಡಿ ಹಾಗೂ ಸಾಗುವಳಿ ಮಂಜೂರು ಮಾಡದೆ ಕಾನೂನು ವಿರೋಧಿ ನಡೆ ನಡೆಸುತ್ತಿದೆ ಎಂದು ಆರೋಪಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ಅರಕೆರೆ ಗ್ರಾಮದ ಬಡರೈತ ಮಹಿಳೆಯರು 1972 ರಿಂದಲೂ ದಾನವಾಡಿ ಗ್ರಾಮದ ಸರ್ವೆ ನಂ : 29 ರಲ್ಲಿ ಹುಲ್ಲು ಬನ್ನಿ ಜಾಗಕ್ಕೆ ಸಾಗುವಳಿ ಮಾಡಿ ಕೊಂಡು ಬಂದವರಿಗೆ 2024 ರಲ್ಲಿ ಅರಣ್ಯಾಧಿ ಕಾರಿಗಳು ಈ ಜಾಗವನ್ನು ಅರಣ್ಯ ಜಾಗವೆಂದು ಹೇಳಿ ಅರಣ್ಯ ಜಾಗವನ್ನು ಒತ್ತುವರಿ ಮಾಡಿರುವುದಾಗಿ ಹೇಳಿ ಹೊಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ : 0146/2024 ದಿನಾಂಕ : 29/04/2024 ರಂತೆ ದೂರು ದಾಖಲಿಸಿ ಅಮಾಯಕ ರೈತ ಜನರನ್ನು ಜೈಲಿಗೆ ಹಾಕಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗಿರುತ್ತದೆ ಎಂದು ಆರೋಪಿಸಿದರು.
ದಾನವಾಡಿ ಗ್ರಾಮದ ಸರ್ವೆ ನಂ : 29 ರಲ್ಲಿ ಒಟ್ಟು 454 ಎಕರೆ ಜಮೀನು ಇದ್ದು, ಈ ಪೈಕಿ ರೆವೆನ್ಯೂ ದಾಖಲೆ ಇಂಡೆಕ್ಸ್ ಆಫ್ ಲ್ಯಾಂಡ್ಸ್ ನಲ್ಲಿ ನಮೂದಾಗಿರುವಂತೆ 1936ನೇ ಸಾಲಿನಲ್ಲಿ 350 ಎಕರೆಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದ್ದು ಉಳಿಕೆ 104 ಎಕರೆ ವಿಸ್ತೀರ್ಣವನ್ನು ಗೋಮಾಳ ಪ್ರದೇಶವಾಗಿ ಉಳಿಸಿ ಕೊಂಡಿರುತ್ತಾರೆ. ಆದರೆ 104 ಎಕರೆ ಜಮೀನನ್ನು 51 ಜನ ಭೂ ರಹಿತರಿಗೆ ಉಪವಿಭಾಗಾಧಿಕಾರಿ ಗಳು ಶಿವಮೊಗ್ಗ ರವರು ತಮ್ಮ ಆದೇಶ : 714:71-72 ದಿನಾಂಕ : 22-3-72 ರಲ್ಲಿ ಮಂಜೂರು ಮಾಡಿದ್ದು,ಈ ಪೈಕಿ ಕೇವಲ 86 ಎಕರೆ ಜಮೀನನ್ನು ಮಾತ್ರ ಮಂಜೂರು ಮಾಡಿ ಉಳಿದ 18 ಎಕರೆ ಜಮೀನನ್ನು ನಿಜವಾದ 14 ಜನ ಸಾಗುವಳಿದಾರರಿಗೆ ಮಂಜೂರು ಮಾಡದೆ ಇವರ ವಿರುದ್ಧವೇ ಸುಳ್ಳು ಪ್ರಕರಣ ದಾಖಲು ಮಾಡಿ ಬಡ ರೈತಾಪಿ ವರ್ಗದವರಿಗೆ ನ್ಯಾಯವನ್ನು ನೀಡದೆ ಅವರನ್ನು ಸುಳ್ಳು ಪ್ರಕರಣವನ್ನು ದಾಖಲು ಮಾಡುವ ಮೂಲಕ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ಮಾಡಿರುತ್ತಾರೆ.
ಇಷ್ಟು ವರ್ಷದಿಂದ ಇದ್ದ ಹುಲ್ಲು ಬನ್ನಿ ಜಮೀನನ್ನು ಏಕಾ ಏಕಿ ಅರಣ್ಯ ಜಮೀನು ಎಂದು ಬದಲಾವಣೆ ಮಾಡಿದ್ದು ಈ ಬಗ್ಗೆ ಕೆಲವು ಅಧಿಕಾರಿ ಗಳ ಜೊತೆಗೆ ಕೆಲ ಶ್ರೀಮಂತರು ಸಹ ಕೈಗೂಡಿಸಿರುವ ಬಗ್ಗೆ ಅನುಮಾನ ಇರುತ್ತದೆ ಎಂದು ಕಿಡಿಕಾರಿದರು.
ಈ ಬಗ್ಗೆ ಉನ್ನತಮಟ್ಟದ ತನಿಖೆ ಯನ್ನು ನಡೆಸಿ ಈ ಅಕ್ರಮದ ವಿರುದ್ಧ ನಿಂತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಿಜವಾದ ರೈತಾಪಿ ವರ್ಗದವರಿಗೆ ಮತ್ತು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಜನರಿದ್ದಾರೆಂದರು.
ಕೂಡಲೇ ಮುಖ್ಯಮಂತ್ರಿಗಳು, ಸಂಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಸಂವಿಧಾನದ ಬದ್ದವಾಗಿ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನ್ಯಾಯ ಕೊಡಿಸಿಕೊಡ ಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಾಲಮ್ಮ, ಪಿ.ಲತಾ, ಆರ್. ವಿಶಾಲಾಕ್ಷಿ, ಲಕ್ಷ್ಮೀದೇವಿ, ಆರ್. ಗಜೇಂದ್ರ, ಎಚ್.ರಂಗನಾಥ್ ಸೇರಿದಂತೆ ಅನೇಕರು ಭಾಗವಹಿಸಿ ಗ್ರೇಡ್ -2 ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.