ಭದ್ರಾವತಿ-ಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ವಶಕ್ಕೆ: ಲಕ್ಷಾಂತರ ರೂ.ಮೌಲ್ಯದ ಆಭರಣ ವಶ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮನೆ ಬೀಗ ಮುರಿದು ಆಭರಣ ಕಳವು ಮಾಡಿದ್ದ ಪ್ರಕರಣ ವನ್ನು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ₹6.89 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಘಟನೆಯ ವಿವರ:

ಆ: 17, 2026 ರಂದು ತಾಲ್ಲೂಕಿನ ತಡಸ ಗ್ರಾಮದಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಕಳ್ಳರು ಮನೆಯೊಂದರ ಅಡುಗೆ ಕೋಣೆಯ ವೆಂಟಿಲೇಟರ್ ಮೂಲಕ ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದರು. ಈ ಸಂಬಂಧ ನೀಡಿದ ದೂರಿನನ್ವಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 177/2026, ಕಲಂ 331(3), 305(A) BNS ಕಾಯ್ದೆಯಡಿ) ಪ್ರಕರಣ ದಾಖಲಾಗಿತ್ತು.

ಮಿಂಚಿನ ಕಾರ್ಯಾಚರಣೆ:

ಪ್ರಕರಣದ ತನಿಖೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ವಿ. ಜಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಗ್ರಾಮಾಂತರ ಇನ್ಸ್‌ಪೆಕ್ಟರ್ ಚಿದಾನಂದ, ಪಿಎಸ್‌ಐ ಶಿಲ್ಪಾ ನಾಯನೇಗಲಿ, ಪಿಎಸ್‌ಐ ಮಹೇಶ್, ಎಎಸ್‌ಐಗಳಾದ ವೆಂಕಟೇಶ್, ರವಿಕುಮಾರ್, ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಮಂಜುನಾಥ್, ಅರುಣ್ ಕುಮಾರ್, ಈರಯ್ಯ ಮತ್ತು ವಿಜಯ್ ಕುಮಾರ್ ಅವರನ್ನೊಳ ಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಆ: 19 ರಂದು ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ₹6,89,965/- ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಪ್ರಕರಣವನ್ನು ಕೇವಲ ಎರಡೇ ದಿನ ಗಳಲ್ಲಿ ಭೇದಿಸಿ, ಕಳುವಾಗಿದ್ದ ಸ್ವತ್ತು ಗಳನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು