ಕೆಎಸ್‌ಆರ್‌ಪಿ ಲಿಖಿತ ಪರೀಕ್ಷೆ ಯಶಸ್ವಿ: ಜಿಲ್ಲೆಯಲ್ಲಿ 12,858 ಅಭ್ಯರ್ಥಿಗಳು ಹಾಜರು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕೆಎಸ್‌ಆರ್‌ಪಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಭಾನುವಾರ ನಡೆದ RPC NKK ವೃಂದದ ಲಿಖಿತ ಪರೀಕ್ಷೆ ಶಿವಮೊಗ್ಗ ನಗರದ 29 ಹಾಗೂ ಭದ್ರಾವತಿ ನಗರದ 5 ಶಾಲಾ- ಕಾಲೇಜುಗಳು ಸೇರಿದಂತೆ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಆಯೋಜಿಸಲಾಗಿತ್ತು. ಇದೇ ವೇಳೆ RPC KK ವೃಂದದ ಪರೀಕ್ಷೆ ಯನ್ನು 13 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.

RPC NKK ವೃಂದಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 11,712 ಅಭ್ಯರ್ಥಿ ಗಳು ನಿಗದಿ ಯಾಗಿದ್ದು, ಅವರಲ್ಲಿ 9,380 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಇನ್ನು RPC KK ವೃಂದದಲ್ಲಿ ಒಟ್ಟು 4,118 ಅಭ್ಯರ್ಥಿಗಳು ನಿಗದಿ ಯಾಗಿದ್ದು, 3,478 ಮಂದಿ ಪರೀಕ್ಷೆ ಬರೆದಿದ್ದಾರೆ.

ಎರಡೂ ವೃಂದಗಳನ್ನು ಸೇರಿಸಿ ಒಟ್ಟು 12,858 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.ಪರೀಕ್ಷೆ ಯಾವುದೇ ಅಡೆತಡೆಯಿಲ್ಲದೆ ನಡೆಯುವಂತೆ ಜಿಲ್ಲಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು.

ಪರೀಕ್ಷಾ ಕೇಂದ್ರಗಳ ಭದ್ರತೆ, ಸುತ್ತ ಮುತ್ತಲಿನ ಪ್ರದೇಶದ ಮೇಲ್ವಿಚಾರಣೆ ಹಾಗೂ ಅಭ್ಯರ್ಥಿಗಳ ಫ್ರಿಸ್ಕಿಂಗ್‌ಗಾಗಿ 9 ಡಿವೈಎಸ್‌ಪಿ, 34 ಪೊಲೀಸ್ ಇನ್‌ಸ್ಪೆಕ್ಟರ್, 34 ಪಿಎಸ್‌ಐ, 4 ಎಎಸ್‌ಐ ಹಾಗೂ 135 ಹೆಡ್ ಕಾನ್‌ಸ್ಟೆಬಲ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಒಟ್ಟು 216 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಅಭ್ಯರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಗಾಳಿ-ಬೆಳಕು, ಪೀಠೋಪಕರಣ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪರೀಕ್ಷೆಯ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಜಿಲ್ಲೆಯಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯ ಲಿಖಿತ ಪರೀಕ್ಷೆ ಯಾವುದೇ ಅಹಿತಕರ ಘಟನೆ ಗಳಿಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಪರೀಕ್ಷೆ ಯಶಸ್ವಿಯಾಗಲು ಸಹಕರಿಸಿದ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಜಿಲ್ಲಾ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು