ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪೊಲೀಸರಿಂದ ತಪ್ಪಿಸಿ ಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
ನಗರದ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಹಾಗೂ ಪ್ರಸನ್ನ ಎಂಬುವರು ಕೆರೆಯ ನೀರಿಗೆ ಧುಮುಕಿ, ಜೀವದ ಹಂಗು ತೊರೆದು ಆರೋಪಿಯ ಹೆಡೆಮುರಿಕಟ್ಟಿದ್ದಾರೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ನ್ಯಾಯಾಲಯದಿಂದ 3 ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಕೊನೆಗೂ ಲಾಕ್ ಮಾಡಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ 'ದಿಲೀಪ @ ಕರಿಯಾ' ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಳ್ಳತನ, ಕೊಲೆ ಯತ್ನ ಸೇರಿದಂತೆ ಬಂಧಿತ ಆರೋಪಿ ಕರಿಯಾ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದವು.
ಪೊಲೀಸರು ಅರೆಸ್ಟ್ ಮಾಡಲು ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಆರೋಪಿ ತಪ್ಪಿಸಿಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದನು. ಆರೋಪಿಯ ಸುಳಿವು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿ.ಹೆಚ್.ಸಿ. ಗಂಗಾಧರ ಹಾಗೂ ಹಾಲಪ್ಪ ಪ್ರಮುಖ ಪಾತ್ರ ವಹಿಸಿದ್ದು, ಸಿನಿಮಾ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನ್ಯೂಟೌನ್ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.