ವಿಜಯ ಸಂಘರ್ಷ
ತೀರ್ಥಹಳ್ಳಿ: ಹಾರೇಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆರಸ ಕುತ್ರೊಳ್ಳಿ ಸಂಪರ್ಕ ರಸ್ತೆಯ ಮೋರಿ ಮೊನ್ನೆ
ಸುರಿದ ಭಾರೀ ಮಳೆಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿದ್ದು ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಿದೆ.
ಕುತ್ರೊಳ್ಳಿ ಹೊಗುವ ರಸ್ತೆಯಲ್ಲಿ ಹಿಂದೆಂದೂ ಹರಿಯದಿರುವಷ್ಟು ನೀರು ಈ ಬಾರಿ ಉಕ್ಕಿ ಹರಿದಿದ್ದರಿಂದ ಊರನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಮೋರಿಯು ಒಡೆದು ಮೋರಿಗೆ ಹಾಕಿದ ಸಿಮೆಂಟ್ ಪೈಪ್‌ಗಳೆಲ್ಲ ಕಾಣಿಸುವ ರೀತಿಯಲ್ಲಿದೆ. ನೀರಿನ ರಭಸಕ್ಕೆ ಬೃಹತ್ ಗಾತ್ರದ ಹೊಂಡ ಬಿದ್ದಿದ್ದು ಗ್ರಾಮಸ್ಥರು ಬೇರೆ ವಿಧಿ ಇಲ್ಲದೆ ಈ ಅಪಾಯಕಾರಿ ಮೋರಿಯನ್ನು ದಾಟಿಕೊಂಡು ಗೆರಸ ಮುಖ್ಯ ರಸ್ತೆಗೆ ಬರಬೇಕಾಗಿದೆ. ಮಕ್ಕಳು, ವಯಸ್ಸದಾವರಂತೂ ಇಲ್ಲಿ ತಿರುಗಾಡುವಂತೆಯೇ ಇಲ್ಲ. ಇನ್ನು ಯಾರಿಗಾದರೂ ಅನಾರೋಗ್ಯವಾದರಂತೂ ಅಂಬುಲೆನ್ಸ್ ಕೂಡ ಹೋಗುವಂತಿಲ್ಲವಾಗಿದೆ. ಹತ್ತರಿಂದ ಹದಿನೈದು ಮನೆಗಳು ಇರುವಂತಹ ಈ ಊರಿನ ಗ್ರಾಮಸ್ಥರು ಸಂಪರ್ಕ ಕಡಿತ ರಸ್ತೆ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಂಡು ಒಂದು ವಾರವಾದರೂ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸದೆ ಕನಿಷ್ಟ ವೀಕ್ಷಣೆಗೂ ಬಾರದೇ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ತಕ್ಷಣ ಗಮನಿಸಿ
ಗ್ರಾಮವನ್ನು ಸಂಪರ್ಕಿಸುವ ಹೊಂಡ ಬಿದ್ದ ಮೋರಿಯನ್ನು ಆದಷ್ಟು ಶೀಘ್ರವಾಗಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಗ್ರಾಮಸ್ಥರ ರಸ್ತೆ ಸಂಕಷ್ಟವನ್ನು ಸರಿಪಡಿಸಲು ಆದಷ್ಟು ಬೇಗ ಮುಂದಾಗಲಿ ಎನ್ನುವ ಮಾತು ಆ ಭಾಗದ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
✍️: ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795