ಕಟ್ಟಡ ಕಾರ್ಮಿಕರು ಮಕ್ಕಳಿಗೆ ಶಿಕ್ಷಣದ ಕಡೆ ಗಮನ ಹರಿಸಿ : ಶಾಸಕ ಸಂಗಮೇಶ್ವರ್

 


ವಿಜಯ ಸಂಘರ್ಷ

ಭದ್ರಾವತಿ: ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.

   ಅವರು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.




ಸಮಾಜದಲ್ಲಿ ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟ ಎಲ್ಲರಿಗೂ ತಿಳಿದಿದೆ. ಶ್ರಮ ಜೀವಿಗಳಾದ ತಾವು ತಮ್ಮ ದುಡಿಮೆಯಲ್ಲಿ ಸಾಧ್ಯವಾದಷ್ಟು ಉಳಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಲ್ಲಿ ಭವಿಷ್ಯದಲ್ಲಿ ಕುಟುಂಬದ ಆಧಾರಸ್ತಂಭಗಳಾಗುವ ಜೊತೆಗೆ ಅವರ ಬದುಕು ಸಹ ಉಜ್ವಲಗೊಳ್ಳಲಿದೆ ಎಂದರು.

     ಕಳೆದ ಸುಮಾರು 2 ವರ್ಷಗಳಿಂದ ಕೋವಿಡ್-19 ರ ಪರಿಣಾಮ ಜನಸಾಮಾನ್ಯರ ಬದುಕು ಅತಂತ್ರವಾಗಿದ್ದು, ಪ್ರತಿದಿನ ಜೀವ ಭಯದಲ್ಲಿ ಬದುಕು ಸಾಗಿಸುವಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕಟ್ಟಡ ಕಾರ್ಮಿಕರು ಅತಿಹೆಚ್ಚು ಜಾಗೃತರಾಗಬೇಕಾಗಿದೆ. ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿಗೆ ಒಳಗಾಗಬಾರದು. ಒಂದು ವೇಳೆ ಕ್ಷೇತ್ರದಲ್ಲಿ ಸೋಂಕಿಗೆ ಒಳಗಾದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಸಾಧ್ಯವಾಗಿದ್ದು,  ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಬಹುತೇಕ ಸೋಂಕಿತರು ಗುಣಮುಖರಾಗಿ ಹಿಂದಿರುಗಿಲ್ಲ. ಈ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಎಚ್ಚರಿಸಿದರು.

    ನಗರಸಭಾ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅವರ ಒಡನಾಡಿಯಾಗಿ ಹತ್ತಿರದಿಂದ ಕಂಡಿದ್ದೇನೆ. ಕಟ್ಟಡ ಕಾರ್ಮಿಕರ ಬದುಕು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬಲಿಯಾಗಬಾರದು. ಈಗಾಗಲೇ ಕೊರೋನಾ 1 ಮತ್ತು 2 ನೇ ಅಲೆ ಪರಿಣಾಮ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. 3 ನೇ ಅಲೆ ಮಕ್ಕಳನ್ನು ಬಾಧಿಸುವ ಕುರಿತು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು. ಅಲ್ಲದೆ ಎಲ್ಲಾ ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿಸಿ ಚೀಟಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

    ಕಾರ್ಮಿಕ ನಿರೀಕ್ಷಕಿ ಮಮತಾಜ್ ಬೇಗಂ, ನಗರಸಭಾ ಸದಸ್ಯ ಜಾರ್ಜ್, ಕಟ್ಟಡ ಕಾರ್ಮಿಕರ ಸಂಘದ ಮಹಿಳಾ ಘಟಕದ ಪದಾಧಿಕಾರಿ ಹಾಗು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ಉಪಾಧ್ಯಕ್ಷ ಚಂದ್ರಶೇಖರ್, ತಾಲೂಕು ಅಧ್ಯಕ್ಷ ನಾಗರಾಜ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಅಂತೋಣಿ ಕ್ರೂಸ್, ತಾಲೂಕು ಪೈಂಟರ್‍ಸ್ ಸಂಘದ ಗೌರವಾಧ್ಯಕ್ಷ ಶಿವಣ್ಣಗೌಡ, ಅಧ್ಯಕ್ಷ ಮಂಜುನಾಥ್, ಕುಂಚ ಕಲಾವಿದರ ಸಂಘದ ಹಫೀಜ್ ಉರ್ ರಹಮಾನ್ ವೇದಿಕೆಯಲ್ಲಿ ಇದ್ದರು.  

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು