ಬೊಮ್ಮಾಯಿ ಸಿಎಂ ಹುದ್ದೆಗೆ ನ್ಯಾಯ ಒದಗಿಸುವರೇ: ಎಎಪಿ ಪ್ರಶ್ನೆ

 


ವಿಜಯ ಸಂಘರ್ಷ

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದ್ದು, ಗೃಹ ಖಾತೆಯನ್ನು ನಿಭಾಯಿಸುವುದರಲ್ಲೇ ವಿಫಲ ರಾಗಿರುವ ಬಸವರಾಜ್‌ ಬೊಮ್ಮಾಯಿ ಯವರು ಮುಖ್ಯಮಂತ್ರಿ ಹುದ್ದೆಗೆ ನ್ಯಾಯ ಒದಗಿಸುವರೇ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗುತ್ತಿವೆ. ಮಕ್ಕಳು ಮಹಿಳೆಯರು ಮಾತ್ರವಲ್ಲದೇ ಸಣ್ಣಪುಟ್ಟ ಜನಪ್ರತಿನಿಧಿಗಳು ಕೂಡ ಹೆದರಿಕೆಯಿಂದ ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್‌ಡೌನ್‌ ಬಳಿಕ ಅಪರಾಧ ಪ್ರಕರಣಗಳು ಶೇ. 20ರಷ್ಟು ಹೆಚ್ಚಾಗಿದೆ ಎಂದು ಬಸವರಾಜ್‌ ಬೊಮ್ಮಾಯಿಯವರೇ 15 ದಿನಗಳ ಹಿಂದೆ ಒಪ್ಪಿಕೊಂಡಿದ್ದರು. ಆದರೂ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ತನಿಖೆ ನಡೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕ ಠಾಣೆಗಳಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಜೂನ್‌ ಒಂದೇ ತಿಂಗಳಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 703 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ 35 ದಿನಗಳಲ್ಲಿ ಮಾಜಿ ಜನಪ್ರತಿನಿಧಿ, ಕೂಲಿ ಕಾರ್ಮಿಕ, ಗೃಹಿಣಿ, ಆಟೋ ಚಾಲಕರು ಸೇರಿದಂತೆ ಬೆಂಗಳೂರಿನ 8 ಮಂದಿಯ ಕೊಲೆಯಾಗಿದೆ. ಕಳೆದ ಏಳು ತಿಂಗಳಿನಲ್ಲಿ ರಾಜಧಾನಿಯಲ್ಲಿ 82 ಕೊಲೆ, 22 ಡಕಾಯಿತಿ, 87 ಸರಗಳ್ಳತನ, 219 ದರೋಡೆ, 304 ಲೈಂಗಿಕ ಕಿರುಕುಳ, 521 ಕಳವು ಪ್ರಕರಣ ದಾಖಲಾಗಿವೆ. ಪುಡಿ ರೌಡಿಗಳೂ ಕೂಡ ಕೊಲೆಯಂತಹ ಭೀಕರ ಅಪರಾಧ ಮಾಡುತ್ತಿದ್ದಾರೆ. ಪೊಲೀಸರೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಪರಾಧಿಗಳು ರಾಜಾರೋಷವಾಗಿ ಹಾಗೂ ಜನಸಾಮಾನ್ಯರು ಹೆದರಿಕೆಯಿಂದ ಬದುಕುವಂತೆ ಮಾಡಿರುವುದೇ ಬೊಮ್ಮಾಯಿಯವರ ಸಾಧನೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡ ವಿಜಯ್‌ ಶಾಸ್ತ್ರಿಮಠ್‌  ಮಾತನಾಡಿ, ರಾಜ್ಯದಲ್ಲಿ ಸೈಬರ್‌ ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು, ಅವರ ಸ್ನೇಹಿತರಿಗೆಲ್ಲ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿ ಹಣ ಕೇಳುವ ದೊಡ್ಡ ಜಾಲವಿದೆ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸೇರಿದಂತೆ ರಾಜ್ಯದ ಲಕ್ಷಕ್ಕೂ ಅಧಿಕ ಸಾಮಾಜಿಕ ತಾಣ ಬಳಕೆದಾರರು ಇದರಿಂದ ತೊಂದರೆ ಅನುಭವಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಇಂತಹ ಯಾವುದೇ ಪ್ರಕರಣವನ್ನು ಬೇಧಿಸಿಲ್ಲ. ಇದರಿಂದಾಗಿ ಜನರು ಸಾಮಾಜಿಕ ತಾಣಗಳಿಂದ ದೂರವಾಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಉನ್ನತ ಅಧಿಕಾರಿಗಳ ಸಭೆ ಕರೆದು, ಅಪರಾಧ ಗಳಿಗೆ ಕಡಿವಾಣ ಹಾಕುವ ಬಗ್ಗೆ ಗಂಭಿರ ವಾಗಿ ಚರ್ಚಿಸಬೇಕು. ಒಂದು ತಿಂಗಳೊಳಗೆ ʻಶೂನ್ಯ ಅಪರಾಧಗಳ ರಾಜ್ಯʼ ಎಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗುವಂತೆ ಮಾಡಬೇಕು” ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಎಪಿಯ ಮಹಿಳಾ ಮುಖಂಡರಾದ ಉಷಾ ಮೋಹನ್‌ ಉಪಸ್ಥಿತರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು