ವಿಜಯ ಸಂಘರ್ಷ
ಶಿವಮೊಗ್ಗ: ವಿದ್ಯುತ್ ಕಾಯಿದೆ ತಿದ್ದುಪಡಿ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ವಿದ್ಯುತ್ ಕಾಯಿದೆ ತಿದ್ದುಪಡಿ ಮಾಡುತ್ತಿದ್ದು, ಇದನ್ನು ಲೋಕಸಭಾ ಅಧಿವೇಶನಲ್ಲಿ ಮಂಡಿಸಲಿದೆ. ಈ ಕಾಯಿದೆ ರೈತರಿಗೆ ಮರಣ ಶಾಸನವಾಗಲಿದೆ. ಇದರಿಂದಾಗಿ ಈ ಕಾಯಿದೆಯನ್ನು ಮಂಡಿಸಬಾರ ದೆಂದು ಆಗ್ರಹಿಸಿದರು.
ದುಬಾರಿ ವಿದ್ಯುತ್ ಬಿಲ್ ಪಾವತಿಸಿ ಬೆಳೆ ಬೆಳೆದು ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ. ನಷ್ಟ ಉಂಟಾಗುವುದರಿಂದ ರೈತರು ಕೃಷಿಯಿಂದಲೇ ವಿಮುಖರಾಗುವ ಸಾಧ್ಯತೆ ಇದೆ. ಕೃಷಿಗೆ ಉಚಿತ ವಿದ್ಯುತ್ ನೀಡಬೇಕೆಂಬ ಬೇಡಿಕೆ ಇದ್ದರೂ ಕೂಡ ಅದನ್ನು ಮಾನ್ಯ ಮಾಡದೆ ಖಾಸಗೀಕರಣ ಮಾಡಿ ವಿದ್ಯುತ್ ಬಿಲ್ ವಿಧಿಸುವುದು ಖಂಡನೀಯವೆಂದು ಹೇಳಿದರು.
ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ 8 ತಿಂಗಳಿಂದ ರೈತರು ದೆಹಲಿಯ ಹೊರ ಭಾಗದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೂಡ 18 ತಿಂಗಳವರೆಗೆ ತಿದ್ದುಪಡಿ ಕಾಯಿದೆಗಳನ್ನು ಜಾರಿಗೊಳಿಸ ಬಾರದೆಂದು ಆದೇಶಿಸಿದೆ. ಆದರೂ ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವುದು ದುರಾದೃಷ್ಟಕರ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯಿದೆ ಅಡಿ ಉಪ ಗುತ್ತಿಗೆ, ಪ್ರಾಂಚೈಸಿಗಳಿಗೆ ಅವಕಾಶವಿದೆ. ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಲಭ್ಯವಾಗುವುದಿಲ್ಲ. ಭಾಗ್ಯ ಜ್ಯೋತಿ, ಕಟೀರ ಜ್ಯೋತಿ, ಬೀದಿ ದೀಪ, ಸಾರ್ವಜನಿಕ ಕುಡಿಯುವ ನೀರಿನ ಘಟಕಗಳಿಗೆ ಹೀಗೆ ಎಲ್ಲದಕ್ಕೂ ಶುಲ್ಕ ನೀಡಬೇಕಾಗುತ್ತದೆ ಎಂದರು.
ವಿದ್ಯುತ್ ಕ್ಷೇತ್ರ ಖಾಸಗೀಕರಣವಾದರೆ ಪ್ರಿಪೇಯ್ಡ್ ನಿಯಮ ಜಾರಿಯಾಗಲಿದೆ. ಮುಂಚಿತವಾಗಿ ಹಣ ನೀಡಿ ವಿದ್ಯುತ್ ಖರೀದಿಸಬೇಕಾಗುತ್ತದೆ. ಹೀಗಾಗಿ ಇದು ಕೃಷಿ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸ ಲಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ರೈತಸಸಂಘದ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ತಮ್ಮಡಿಹಳ್ಳಿ ಹಾಲೇಶಪ್ಪ, ಹಿಟ್ಟೂರು ರಾಜು, ವೀರೇಶ್, ಚಂದ್ರಪ್ಪ, ರಾಘವೇಂದ್ರ, ಮಂಜಪ್ಪ, ರಾಮಚಂದ್ರಪ್ಪ, ರುದ್ರೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಎನ್. ರಮೇಶ್, ಡಿ.ಎಸ್. ಹಾಲೇಶಪ್ಪ ಇದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795