ವಿಜಯ ಸಂಘರ್ಷ
ಭದ್ರಾವತಿ: ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ 6 ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ರೈಲು ತಡೆ ಚಳುವಳಿ ನಡೆಸಲಾಯಿತು.
ದೇಶಕ್ಕೆ ಉಜ್ವಲ ಭವಿಷ್ಯ ಕಲ್ಪಿಸಿ ಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿ ಸಲಾಯಿತು.
ಈಗಾಗಲೇ ಎನ್‌ಎಂಪಿ ಯೋಜನೆ ಯಡಿಯಲ್ಲಿ ಸುಮಾರು 26,700 ರಾಷ್ಟ್ರೀಯ ಹೆದ್ದಾರಿಗಳನ್ನು, 150 ರೈಲು, 400 ರೈಲ್ವೆ ನಿಲ್ದಾಣ, 25 ವಿಮಾನ ನಿಲ್ದಾಣ, 9 ಬಂದರು, 2 ರಾಷ್ಟ್ರೀಯ ಕ್ರೀಡಾಂಗಣಗಳು, ವಿದ್ಯುತ್ ಘಟಕಗಳು, ಟೆಲಿಕಾಂ ನೆಟ್‌ವರ್ಕ್‌ಗಳನ್ನು ಹೀಗೆ 13 ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನರನ್ನು ಖಾಸಗಿ ಕಂಪನಿಗಳ ಗುಲಾಮರನ್ನಾಗಿ ಮಾಡಲು ಹೊರಟಿ ರುವುದು ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಜನ ವಿರೋಧಿ ನೀತಿ ಎದ್ದು ಕಾಣುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿಗಳು ತಕ್ಷಣ ದೇಶದ ಸಾರ್ವಜನಿಕ ಆಸ್ತಿಗಳನ್ನು ಮಾರುವಂತಹ ದೇಶವಿರೋಧಿ ಯೋಜನೆಗಳಿಗೆ ಕಡಿವಾಣ ಹಾಕಿ ಖಾಸಗಿ ಕಂಪನಿಗಳ ಪರವಾಗಿರುವ ಹಾಗು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರ ವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ.ವಿನೋದ್ ಕುಮಾರ್ ನೇತೃತ್ವ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಮಹಮದ್, ನಗರ ಉಪಾಧ್ಯಕ್ಷ ತೇಜಸ್ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಗಂಗಾಧರ್, ಐಸಾಕ್, ಶಂಕರ್, ವಾಸಿಂ, ಲಿಯಾಂದರ್, ಜಾವಿದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795