ವಾರ್ಡ್ ನಂಬರ್ 29: ಪ್ರಬಲ ಪೈಪೋಟಿಯಲ್ಲಿ ಮೂರು ಪಕ್ಷದ ಅಭ್ಯರ್ಥಿ ಗಳು ಒಕ್ಕಲಿಗರೆ..!

 

ವಿಜಯ ಸಂಘರ್ಷ



ಭದ್ರಾವತಿ : ನಗರಸಭೆ 29ನೇ ವಾರ್ಡ್‌ ಉಪಚುನಾವಣೆಯು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು ಮೂರು ಪಕ್ಷಗಳೂ ಪ್ರತಿಷ್ಠೆಯಾಗಿ ಪರಿಗಣಿಸಿವೆ.
ಪಕ್ಷೇತರರಾಗಿ ಯಾರೂ ಸ್ಪರ್ಧಿಸದಿರುವುದು ವಿಶೇಷ.

ಈ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಶ್ರುತಿ ಮಂಜುನಾಥ್‌ ನಿಧನದ ಪರಿಣಾಮ ಚುನಾವಣೆ ಮುಂದೂಡಲಾಗಿದ್ದು, ಸೆ : 3 ರಂದು ಚುನಾವಣೆ ನಡೆಯಲಿದೆ.
ಹಿಂದಿನಂತೆ ಜೆಡಿಎಸ್‌ ಅಭ್ಯರ್ಥಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬಿಜೆಪಿಯಿಂದ ಶೋಭಾ ಬದಲಿಗೆ ರಮಾ ವೆಂಕಟೇಶ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. 29ನೇ ವಾರ್ಡ್‌ ಹಿಂದಿನಿಂದಲೂ ಜೆಡಿಎಸ್‌ ಹಿಡಿತದಲ್ಲಿದ್ದು ಅದನ್ನು ಗೆಲ್ಲಲು ಕಾಂಗ್ರೆಸ್‌, ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ.

ಒಕ್ಕಲಿಗರ ಮತಗಳೇ ಹೆಚ್ಚಿರುವ ಈ ವಾರ್ಡ್‌ನಲ್ಲಿ ಮೂರು ಪಕ್ಷದಿಂದಲೂ ಒಕ್ಕಲಿಗ ಅಭ್ಯರ್ಥಿಗಳೇ ಕಣಕ್ಕಿಳಿದಿರುವುದು ವಿಶೇಷ. ಕಳೆದ ಬಾರಿ 29ನೇ ವಾರ್ಡ್‌ನಿಂದ ಅನಿಲ್‌ಕುಮಾರ್‌ ಆಯ್ಕೆಯಾಗಿದ್ದರು. ಮೀಸಲಾತಿ ಬದಲಾದ ಕಾರಣ ಪತ್ನಿ ನಾಗರತ್ನರನ್ನು ಕಣಕ್ಕಿಳಿಸಿದ್ದಾರೆ.

ಅವರ ಪರವಾಗಿ ಜೆಡಿಎಸ್‌ ಮುಖಂಡರಾದ ಅಜಿತ್‌ ಅಪ್ಪಾಜಿ ಗೌಡ, ಶಾರದಾ ಅಪ್ಪಾಜಿ, ಯೋಗೇಶ್‌ ಗೌಡ, ಮಣಿಶೇಖರ್‌ ಸೇರಿ ಘಟಾನುಘಟಿಗಳು ಭರ್ಜರಿ ಕ್ಯಾಂಪೇನ್‌ ಮಾಡುತ್ತಿದ್ದು ಐದಾರು ಬಾರಿ ಮನೆ- ಮನೆ ಸಂದರ್ಶನ ಮಾಡಿದ್ದು ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಲೋಹಿತಾ ನಂಜಪ್ಪ ವೃತ್ತಿಯಲ್ಲಿ ವಕೀಲರಾಗಿದ್ದು ಅವರ ಪತಿ ನಂಜಪ್ಪ ಕೂಡ ವಕೀಲರಾಗಿದ್ದರು. ಮಹಿಳಾ ಒಕ್ಕಲಿಗ ಸಂಘ, ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಪುತ್ರ ಕೂಡ ವಕೀಲರೆಂಬುದು ವಿಶೇಷ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಅವರಿಗೆ ಕಾಂಗ್ರೆಸ್‌ ಶಾಸಕ ಬಿ.ಕೆ. ಸಂಗಮೇಶ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಚಂದ್ರೇಗೌಡ ಸೇರಿ ಹಲವು ಮುಖಂಡರ ಬೆಂಬಲ ಸಿಕ್ಕಿದೆ.

ನಗರಸಭೆಯಲ್ಲಿ ಈಗಾಗಲೇ ಕಾಂಗ್ರೆಸ್‌ ಬಹುಮತ ಸಾಧಿಸಿದ್ದು ಈ ವಾರ್ಡ್‌ ಕೂಡ ಗೆಲ್ಲುವ ಮೂಲಕ ಶಕ್ತಿ ಹೆಚ್ಚಿಸಿಕೊಳ್ಳಲು ಕಾರ್ಯಕರ್ತರು, ಮುಖಂಡರು ಶ್ರಮಿಸುತ್ತಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ರಮಾ ವೆಂಕಟೇಶ್‌ ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಮೂಲಕ ವಾರ್ಡಿನಲ್ಲಿ ಚಿರಪರಿಚಿತರು.

ಘಟಾನುಘಟಿ ನಾಯಕರ ಪ್ರಚಾರದ ಹೊರತಾಗಿಯೂ ನಾಲ್ಕು ಸ್ಥಾನ ಗೆದ್ದಿರುವ ಬಿಜೆಪಿಗೆ ಈ ವಾರ್ಡ್‌ ಕೂಡ ಕಠಿಣ ಸವಾಲಾಗಿ ಪರಿಗಣಿಸಿದೆ. ಈ ಬಾರಿ ತಾಲೂಕು ಮಟ್ಟದ ನಾಯಕರ ಪ್ರಚಾರಕ್ಕೆ ಬಂದಿದ್ದಾರೆ. ಮಹಿಳಾ ಸಂಘಟನೆಗಳ ಮೂಲಕ ಚಿರಪರಿಚಿತ ರಾಗಿರುವ ರಮಾ ವೆಂಕಟೇಶ್‌ ಅದೃಷ್ಟ ಪರೀಕ್ಷೆಗೆ ನಿಂತಿದ್ದು ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ. ಮೂರು ಅಭ್ಯರ್ಥಿಗಳು ಪ್ರಬಲ ಹಿನ್ನೆಲೆಯುಳ್ಳವರಾದ ಕಾರಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು