ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿ ಜನಮನ್ನಣೆ

 

ವಿಜಯ ಸಂಘರ್ಷ



ತೀರ್ಥಹಳ್ಳಿ : ವಿಘ್ನ ವಿನಾಶಕ ಮನೆ ಮನೆಗಳಲ್ಲಿ ಪ್ರತಿಷ್ಟಾಪನೆಗೊಳ್ಳಲು ಎರಡು ದಿನಗಳು ಬಾಕಿಯಿದ್ದು ತಾಲೂಕಿನಾದ್ಯಂತ ಮಳೆಯ ನಡುವೆಯೂ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ.



ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುವ ಕಾರ್ಯವು ಕಲಾವಿದರಿಂದ ನಡೆಯುತ್ತಿದೆ. ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಣೇಬೈಲು ಎಂಬ ಕುಗ್ರಾಮದಲ್ಲಿ   ಅನೇಕ ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ನಾಗರಾಜ್ ಎಂಬುವವರು ಗ್ರಾಮೀಣ ಪ್ರದೇಶಗಳಲ್ಲಿ ಗಣಪತಿ ಹಬ್ಬದ ಸಂದೇಶ ಸಾರುತ್ತಿದ್ದಾರೆ.
ತುಂಗಾನದಿ ತೀರದ ಹಳ್ಳಿಗಾಡಿನ ಕೋದೂರು ಎಂಬ ಪುಟ್ಟ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸುಮಾರು ಇಪ್ಪತ್ತೈದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅರ್ಚಕ ವೃತ್ತಿ ಮಾಡಿಕೊಂಡಿರುವ ನಾಗರಾಜ್‌ ತಮ್ಮ ಹತ್ತೊಂಭತ್ತನೇ ವಯಸ್ಸಿನಿಂದಲೇ ಗಣಪತಿ ಮೂರ್ತಿ ತಯಾರಿಕೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರ ಕುಟುಂಬವು ಕಳೆದ ಅರವತ್ತು -ಎಪ್ಪತ್ತು ವರ್ಷಗಳಿಂದ ಪ್ರತಿ ವರ್ಷವೂ ಗಣೇಶ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡು
ತನ್ನದೇ ಶೈಲಿಯ ಗಣಪತಿ ವಿಗ್ರಹವನ್ನು ತಯಾರಿಸಿ ಜನ ಮನ್ನಣೆ ಗಳಿಸಿದೆ. 



ಹೊರಣೇಬೈಲು ಗ್ರಾಮದ ನಾಗರಾಜ್‌ ರವರ ಕುಟುಂಬ ಪ್ರತಿ ವರ್ಷ ನೂರಾರು ಗಣಪತಿ ಮೂರ್ತಿಗಳನ್ನು ತಯಾರಿಸಿ ಭಕ್ತಾಧಿಗಳಿಗೆ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಮೂಲತಃ ಕೃಷಿಕರಾದ ಇವರು ವೃತ್ತಿಯಲ್ಲಿ ಅರ್ಚಕರು. ಇವರು  ತಮ್ಮ ಬಿಡುವಿನ ಸಮಯದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದ್ದಂತೆ ಇವರು ಬಣ್ಣ ಬಣ್ಣದ ಗಣೇಶ ಮೂರ್ತಿಗಳನ್ನು ತಯಾರಿಸಿ ವಿಶೇಷ ಅಲಂಕಾರ ಮಾಡಿ ಅಂತಿಮ ರೂಪ ನೀಡುತ್ತಾರೆ. ತಮ್ಮ ಕೈಚಳಕದಿಂದ ಝಗಮಗಿಸುವ ಬಣ್ಣ ಬಣ್ಣಗಳಿಂದ ವಿಘ್ನೇಶ್ವರ ಮೂರ್ತಿ ತಯಾರಿಸುವ ಕಾಯಕ ಇವರಿಗೆ ತೃಪ್ತಿ ತಂದಿದೆ ಎನ್ನುತ್ತಾರೆ ನಾಗರಾಜ್‌ರವರು.
ತನ್ನ ಪತ್ನಿ ಅನುಪಮ ಮತ್ತು ಪಿಯುಸಿ ಓದುತ್ತಿರುವ ಮಗ ಮಾಧವ ಮತ್ತು ಪದವಿ ಓದುತ್ತಿರುವ ಮಗಳ ಜೊತೆಗೂಡಿ ಕುಟುಂಬದ ಸಹಕಾರದಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಗಣಪತಿ ವಿಗ್ರಹಗಳನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಕಳೆದ 60-70 ವರ್ಷಗಳಿಂದ ತಂದೆ ನರಸಿಂಹ ಭಟ್, ಅಜ್ಜ ಲಕ್ಷ್ಮೀ ನಾರಾಯಣ ಭಟ್ ಮತ್ತು ಮುತ್ತಜ್ಜನ ಕಾಲದಿಂದ ಬಂದಿರುವ ಈ ವಿಗ್ರಹ ತಯಾರಿಸುವ ಕಾಯಕವನ್ನು ನಾಗರಾಜ್‌ರವರ ಕುಟುಂಬ ಮುಂದುವರೆಸಿಕೊಂಡು ಬಂದಿದೆ.
ಇವರು ತಯಾರು ಮಾಡುವ ಗಣಪತಿ ಮೂರ್ತಿಗಳಿಗೆ ಹಳ್ಳಿ ಮತ್ತು ಪಟ್ಟಣ ಭಾಗದಲ್ಲಿ ಭಾರಿ ಬೇಡಿಕೆ ಇದೆ.
ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಇವರು ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜೆಗೆ  ತೆಗೆದುಕೊಂಡು ಹೋಗುತ್ತಾರೆ. ಈ ಬಾರಿ ಕೋವಿಡ್ ಸಮಯವಾಗಿದ್ದರಿಂದ ಸುಮಾರು 150 ರಿಂದ 200 ಗಣೇಶ ಮೂರ್ತಿಗಳನ್ನು ತಯಾರಿಸಿದ್ದು ಗಣೇಶ ಚತುರ್ಥಿ ಹಬ್ಬದ ಮುನ್ನಾ ದಿನ ಗಣೇಶ ಮೂರ್ತಿಗಳ ಅಂತಿಮ ಕೆಲಸ ಮುಕ್ತಾಯವಾಗಲಿದೆ ಎಂದು ನಾಗರಾಜ್‌ರವರು ಅತೀ ಉತ್ಸಾಹದಿಂದ ತಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಂಡರು.
ಗಣೇಶ ಚತುರ್ಥಿಗೂ ಎರಡು ತಿಂಗಳು ಮುಂಚೆಯೇ ಇವರು ಗಣಪತಿ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಆಯನೂರು ಸಮೀಪ ಹಾರನಹಳ್ಳಿಯಿಂದ ಮೂರ್ತಿ ತಯಾರಿಕೆಗೆ ಬೇಕಾಗುವ ಮಣ್ಣು ತಂದು ಹದ ಮಾಡಿ ಗಣೇಶ ಮೂರ್ತಿಗೆ ಬೇಕಾದ ಸೊಂಡಿಲು, ಕೈ, ಹಾಗೂ ಕೀರೀಟ ತಯಾರು ಮಾಡುತ್ತಾರೆ. ಇವರ ಜೊತೆ ಪತ್ನಿ ಮತ್ತು  ಮಕ್ಕಳೂ ಸಹ ಈ ಗಣೇಶ ಮೂರ್ತಿ ತಯಾರು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬರೂ ಸಹ ಒಂದೊಂದು ಕೆಲಸ  ಹಂಚಿಕೊಂಡು ಮಾಡುತ್ತಾರೆ. ಗಣೇಶ ಚತುರ್ಥಿಗೆ ಭಕ್ತರಿಗೆ ಬೇಕಾದ ರೀತಿಯಲ್ಲಿ ವಿವಿಧ ಅಳತೆ, ಗಾತ್ರ, ಹಂಸ, ಮಯೂರಿ, ಸುಬ್ರಹ್ಮಣ್ಯ, ಅಂಬಾರಿ, ಬಾಲಗಣಪತಿ, ವಿಷ್ಣು, ದರ್ಬಾರ್ ಗಣಪತಿ, ಮೂಶಿಕ ಗಣಪತಿ ಸೇರಿದಂತೆ ಅನೇಕ ಬಗೆಯ ಸುಂದರ ಮೂರ್ತಿಗಳನ್ನು ತಯಾರು ಮಾಡುತ್ತಿರುವ ಇವರ ಕುಟುಂಬದ ಕಾಯಕಕ್ಕೆ ಅನೇಕ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕಾಯಕವನ್ನು ಭಕ್ತಿ ಭಾವದಿಂದ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ತಮ್ಮಲ್ಲಿ ಬಂದ ಗ್ರಾಹಕರು ಯಾವುದೇ ಗಣಪತಿ ವಿಗ್ರಹ ಕೊಂಡರೂ ಇಂತಿಷ್ಟು  ಹಣ ಎಂಬುದು ಬೇಡಿಕೆ ಮಾಡದೆ ತಂದೆಯ ಮಾತಿನಂತೆ ವೀಳ್ಯದೆಲೆ ಪದ್ಧತಿ ಪ್ರಕಾರ ಶಾಸ್ತ್ರೋಕ್ತ ವಾಗಿ ಭಕ್ತರಿಗೆ ಗಣೇಶ ಮೂರ್ತಿ ನೀಡಲಾಗುತ್ತದೆ. ಇವರು ವಿಗ್ರಹಕ್ಕೆ ಇಂತಿಷ್ಟೇ ಹಣ ಎಂದು ನಿಗದಿ ಪಡಿಸಿಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶದ ಭಕ್ತರು ನಮ್ಮ ಕಡೆಯಿಂದ ಗಣಪತಿ ಮೂರ್ತಿ ಖರೀದಿಸುತ್ತಿರುವುದು ಸಂತಸ ತಂದಿದೆ ಎಂಬುದಾಗಿ ಗಣಪತಿ ಮೂರ್ತಿ ಕಲಾವಿದರು ಹಾಗೂ ರಾಜ್ಯ ಗಣಪತಿ ವಿಗ್ರಹಗಳ ಕಲಾವಿದರ ಸಂಘದ ಸದಸ್ಯ ನಾಗರಾಜ್‌ ತಮ್ಮ ಅಭಿಪ್ರಾಯ ತಿಳಿಸಿದರು. ಇವರ ಸಂಪರ್ಕ ಸಂಖ್ಯೆ: 9481586471, 8762186471

✍🏻 : ರಶ್ಮಿ ಶ್ರೀಕಾಂತ್ ನಾಯಕ್
            ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು