ವಿಐಎಸ್ಎಲ್-ಎಂಪಿಎಂ ಉಳಿವಿಗಾಗಿ ಪತ್ರ ಚಳುವಳಿ

 

ವಿಜಯ ಸಂಘರ್ಷ



ಶಿವಮೊಗ್ಗ : ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಚೌಕೀದಾರ್ ಸರ್ಕಾರವಲ್ಲ, ಚೋರ್ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ ವಾಗ್ದಾಳಿ ನಡೆಸಿದರು.

ಅವರು ಇಂದು ಪ್ರದೇಶ ಯುವಕಾಂಗ್ರೆಸ್ ವತಿಯಿಂದ ವಿಐಎಸ್‌ಎಲ್ ಮತ್ತು ಎಂಪಿಎಂ  ಉಳಿವಿಗಾಗಿ ಆಯೋಜಿಸಿದ್ದ ಪತ್ರ ಚಳವಳಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿ ಉದ್ಯೋಗವ ಕಾಶಗಳನ್ನು ಒದಗಿಸುತ್ತಾ ಬಂದಿತ್ತು. ಆದರೆ, 2014 ರಲ್ಲಿ ಅಚ್ಚೇದಿನ್ ತರುತ್ತೇವೆಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಲಾಭದಾಯಕವಾಗಿ ನಡೆಯುತ್ತಿದ್ದ ಒಂದೊಂದೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಾ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಿಂದ ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಯಾಗಿದ್ದಾರೆ. ಆದರೆ ಎಂಪಿಎಂ ಕಾರ್ಖಾನೆಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸುವ ಮೂಲಕ ಕಾರ್ಖಾನೆ  ನಷ್ಟದ ಹಾದಿ ಹಿಡಿಯಲು ಕಾರಣರಾಗಿದ್ದಾರೆ. ಈಗ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಹಿಂದೆ ಎಂಪಿಎಂ  ಅಧ್ಯಕ್ಷರಾಗಿದ್ದ ಅವಧಿಯಿಂದಲೇ ಕಾರ್ಖಾನೆ ನಷ್ಟದ ಹಾದಿ ಹಿಡಿದಿದೆ ಎಂಬ ಅಪಕೀರ್ತಿ ಅವರಿಗಿದೆ. ಮೂರು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರು ವಿಐಎಸ್‌ಎಲ್ ಪುನಶ್ಚೇತನ ಗೊಳಿಸುವುದಾಗಿ ಹೇಳಿ ಎರಡು ಬಾರಿ ಕೇಂದ್ರ ಸಚಿವರನ್ನು ಕರೆತಂದಿದ್ದರು. ಆದರೆ, ಎಷ್ಟು ಅನುದಾನ ಒದಗಿಸಿದ್ದಾರೆ? ಎಷ್ಟುಬಾರಿ ಸಂಸತ್‌ನಲ್ಲಿ ಅವಳಿ ಕಾರ್ಖಾನೆಗಳ ಉಳಿವಿನ ಕುರಿತು ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು.

ಈಗಾಗಲೇ ಎಂಪಿಎಂ  ಅನ್ನು ಐಟಿಸಿ ಕಂಪನಿಗೆ ಮಾರಾಟ ಮಾಡಲು ಎಲ್ಲ ತಯಾರಿಗಳು ನಡೆದಿವೆ. ವಿಐಎಸ್‌ಎಲ್ ಅನ್ನು ಸಂಪೂರ್ಣ ಮುಚ್ಚುವ ಹುನ್ನಾರ ನಡೆದಿದೆ. ಬಿಜೆಪಿ ನಾಯಕರುಗಳು ದೇಶಭಕ್ತರಲ್ಲ, ದೇಶವನ್ನು ಮಾರಾಟ ಮಾಡುವವರು ಎಂದು ವಾಗ್ದಾಳಿ ನಡೆಸಿದ ಅವರು, ಕೂಡಲೇ ಎಂಪಿಎಂ  ಮತ್ತು ವಿಐಎಸ್‌ಎಲ್ ಉಳಿವಿಗಾಗಿ ಇಲ್ಲಿನ ಸಾರ್ವಜನಿಕರು ಪತ್ರದಲ್ಲಿ ವ್ಯಕ್ತಪಡಿಸಿರುವ ಜನರ ಭಾವನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಗೌರವಿಸಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕೆಂದರು.

ವಿಐಎಸ್‌ಎಲ್ ಉಳಿವಿಗಾಗಿ ಉಗ್ರ ಹೋರಾಟ: ಬಿ.ಎಸ್. ಗಣೇಶ್ 



ಯುವ ಮುಖಂಡ ಗಣೇಶ್ ಮಾತನಾಡಿ, ಜಿಲ್ಲೆಯ ಎರಡು ಕಣ್ಣುಗಳಂತಿದ್ದ ಕಾರ್ಖಾನೆಗಳು ಮುಚ್ಚಿದ್ದು, ಕಾರ್ಮಿಕರು ಕೆಲಸವಿಲ್ಲದೇ ದಯನೀಯ ಸ್ಥಿತಿಯಲ್ಲಿದ್ದಾರೆ. ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದ ಕಾರ್ಖಾನೆಗಳನ್ನು ಬಿಜೆಪಿ ಸರ್ಕಾರ ಮುಚ್ಚುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ವಿಐಎಸ್‌ಎಲ್ ಮತ್ತು ಎಂಪಿಎಂ  ಉಳಿವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ, ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಭದ್ರಾವತಿ ಯಿಂದ ಶಿವಮೊಗ್ಗದ ಸಂಸದರ ಮನೆವರೆಗೆ ಪಾದಯಾತ್ರೆ, ಸಂಸದರ ಮನೆ ಮುತ್ತಿಗೆ ಸೇರಿದಂತೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಲಾಭದಾಯಕ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಧೋರಣೆಯನ್ನು ಜಿಲ್ಲೆಯ ಜನರು ಸಹಿಸುವುದಿಲ್ಲ. ಪ್ರತಿಭಟನೆ ತೀವ್ರಗೊಳಿಸಲಿದ್ದು, ಜಿಲ್ಲೆಯ ಜನರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಯುವಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ನೂರಾರು ಸಾರ್ವಜನಿಕರು ವಿಐಎಸ್‌ಎಲ್ ಮತ್ತು ಎಂಪಿಎಂ  ಕಾರ್ಖಾನೆ ಪುನಶ್ಚೇತನಗೊಳಿಸಿ, ಸಾರ್ವಜನಿಕ ಸಂಸ್ಥೆಗಳನ್ನಾಗಿಯೇ  ಮುಂದುವರೆಸಬೇಕೆಂದು  ಪೋಸ್ಟ್ಕಾರ್ಡ್ ಬರೆದು ಪ್ರಧಾನಿಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಜಿ. ಮಧುಸೂದನ್, ಕೆ.ಚೇತನ್, ಶ್ರೀಜಿತ್, ಸುನೀಲ್, ಮೊಹ್ಮದ್ ನಿಹಾಲ್, ಇರ್ಫಾನ್, ಅಕ್ಬರ್, ಚಿರಂಜೀವಿ ಬಾಬು, ವಿನಯ್, ಗಿರೀಶ್, ಅಬ್ದುಲ್ಲಾ, ರವಿ, ಪ್ರಮೋದ್, ಬಾಲಾಜಿ, ವಿಜಯ್, ಚಂದ್ರೋಜಿರಾವ್, ಮನೋಜ್, ಸಂದೀಪ್, ಪ್ರಸನ್ನ, ಭರತ್ ಮತ್ತಿತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು