ವಿಜಯ ಸಂಘರ್ಷ
ಹೊಸನಗರ (ರಿಪ್ಪನ್ ಪೇಟೆ): ಸೊರಬದಲ್ಲಿ ಈಡಿಗರ ಸಮುದಾಯದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಮಾಜಿ ಶಾಸಕ ಗೋಪಾಲಕೃಷ್ಣ ಅವಹೇಳನಕಾರಿ ಮಾತನಾಡಿದ್ದು ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜದ ಅಧ್ಯಕ್ಷ ಗರ್ತಿಕೆರೆ ಚಂದ್ರಪ್ಪ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಶ್ರೀನಿವಾಸ ಪೂಜಾರಿಯವರಿಗೆ ಹೆಬ್ಬೆಟ್ಟು,ಅವರಿಗೆ ಯಾವುದೇ ವಿಧ್ಯಾಭ್ಯಾಸ ಇಲ್ಲ ಎಂದು ಲಘುವಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಸುಮಂಜಸವಲ್ಲ ಎಂದು ಕಿಡಿಕಾರಿದರು.
ಸಮಾಜದ ಹಿರಿಯ ಮುಖಂಡ ರಿಪ್ಪನ್ ಪೇಟೆಯ ಎನ್.ಸತೀಶ್ ಮಾತನಾಡಿ ಸಚಿವ ಶ್ರೀನಿವಾಸ ಪೂಜಾರಿಯವರಿಗೆ ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಉತ್ತಮ ಹೆಸರು ಗಳಿಸಿದ್ದಾರೆ,ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ.ಈಡಿಗರ ಜಾತಿಯ ಕೋಟಾದಿಂದ ಶ್ರೀನಿವಾಸ ಪೂಜಾರಿ ಮಂತ್ರಿಯಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ,ಇದು ಬೇಳೂರು ರವರ ರಾಜಕೀಯ ಅಪ್ರಬುದ್ದತೆಗೆ ಸಾಕ್ಷಿಯಾಗಿದೆ, 26 ಜಾತಿಗಳನ್ನು ಸೇರಿಸಿ ಈಡಿಗರು ಎಂಬ ಸಮುದಾಯವನ್ನು ರೂಪಿಸಲಾಗಿದೆ ಎಂಬುವುದು ಅವರಿಗೆ ತಿಳಿದಂತಿಲ್ಲ.ಶ್ರೀನಿವಾಸ ಪೂಜಾರಿಯವರ ಕುರಿತು ಲಘುವಾಗಿ ಮಾತನಾಡುವುದು ತರವಲ್ಲ.ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದರು.
ಗ್ರಾಪಂ ಸದಸ್ಯ ಹಾಗೂ ಬಿಲ್ಲವ ಸಮಾಜದ ಪ್ರಮುಖ ಸುಧೀಂದ್ರ ಪೂಜಾರಿ ಮಾತನಾಡಿ ಸಾರ್ವಜನಿಕ ಸಮಾರಂಭದಲ್ಲಿ ಸಚಿವರೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡಬಾರದೆಂಬ ಸಾಮಾನ್ಯ ಜ್ಞಾನ ಬೇಳೂರುರವರಿಗೆ ಇಲ್ಲದೇ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.ಅವರ ಈ ವರ್ತನೆ ಯಿಂದ ಪೂಜಾರ ಸಮುದಾಯ ದವರಿಗೆ ಬೇಸರ ಉಂಟಾಗಿದೆ,ಅವರು ನೀಡಿರುವ ಹೇಳಿಕೆಯನ್ನು ವಾಪಾಸ್ಸು ಪಡೆಯದೇ ಇದ್ದರೆ ಬ್ರಹ್ಮಶ್ರಿ ನಾರಾಯಣ ಗುರು ಬಿಲ್ಲವ ಸಮಾಜ ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿ ಘಟಕದ ವತಿಯಿಂದ ಬೇಳೂರು ಗೋಪಾಲಕೃಷ್ಣ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಗರ್ತಿಕೆರೆ ನಯನ್ ಕುಮಾರ್ ಮತ್ತಿತರರಿದ್ದರು.
ವರದಿ : ರಫಿ ರಿಪ್ಪನ್ ಪೇಟೆ
ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795