ಕುಡಿಯುವ ನೀರಿಗೆ ಕೋಳಿ ತ್ಯಾಜ್ಯ: ಸಾಂಕ್ರಾಮಿಕ ರೋಗ ಹರಡುವ ಭೀತಿ: ಅಧಿಕಾರಿಗಳೆ ಇತ್ತ ಗಮನಿಸಿ.!

 

ವಿಜಯ ಸಂಘರ್ಷ



ತೀರ್ಥಹಳ್ಳಿ: ಕೊರೊನಾ ಸಾಂಕ್ರಾಮಿಕ ರೋಗಗಳ ಭಯದ ನಡುವೆಯೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 14 ರ ಕುರುವಳ್ಳಿ ಬಾದಾಳಗುಂಡಿ ಹತ್ತಿರ ಹಳ್ಳದಲ್ಲಿ ಕೋಳಿ ಅಂಗಡಿಯವರೊಬ್ಬರು ಪ್ರತಿದಿನ ಮುಂಜಾನೆ ರಾಶಿ-ರಾಶಿ ಕೋಳಿ ತ್ಯಾಜ್ಯವನ್ನು ತಂದು ಹಳ್ಳಕ್ಕೆ ಎಸೆಯುವುದು ಕಂಡು ಬರುತ್ತಿದ್ದು  ತ್ಯಾಜ್ಯದ ನೀರು ನೇರವಾಗಿ ಬಾದಾಳಗುಂಡಿ ಮೂಲಕ ತುಂಗಾನದಿ ಸೇರುತ್ತಿದೆ. ಕೋಳಿ ತ್ಯಾಜ್ಯವನ್ನು ತಿನ್ನಲು ನಾಯಿ,  ಹದ್ದು, ನರಿ, ಕಾಗೆಗಳು ಮುಗಿ ಬೀಳುತ್ತಿವೆ.



ಬಾದಾಳಗುಂಡಿ ನೀರು ಪುತ್ತಿಗೆ ಮಠದ ಎದುರು ಇರುವ ಮೇಲಿನ ಕುರುವಳ್ಳಿ ಗ್ರಾಮ  ಪಂಚಾಯಿತಿಯ ಕುಡಿಯುವ ನೀರಿನ ಪಂಪ್‌ಹೌಸ್‌ ಬಳಿ ಬಿದ್ದು ಶೇಖರಣೆಯಾಗಿ ತುಂಗಾನದಿ ಸೇರುತ್ತಿದೆ. ನೀರು ಸೇರುವ ಪಕ್ಕದಲ್ಲಿ ವಿಶೇಷವಾಗಿ  ಅರ್ಚಕವೃಂದದವರಿಂದ ಪ್ರತಿನಿತ್ಯ ಶ್ರದ್ಧಾ ಭಕ್ತಿಯಿಂದ ತುಂಗಾ ನದಿಗೆ ತುಂಗಾರತಿ ನಡೆಯುತ್ತಿದ್ದು ಪ್ರತಿ ದಿನ ತಹಶೀಲ್ದಾರರು ಭಾಗವಹಿಸುತ್ತಾರೆ ಮತ್ತು ತ್ಯಾಜ್ಯ ಎಸೆದ  ಪ್ರದೇಶದ ಹಳ್ಳ ದುರ್ವಾಸನೆ ಬೀರುತ್ತಿದೆ. ಇದೇ ನೀರನ್ನು ಗ್ರಾಮ ಪಂಚಾಯಿತಿಯವರು ಮೇಲಿನ ಕುರುವಳ್ಳಿಯಲ್ಲಿ ಟ್ಯಾಂಕ್ ಒಂದರಲ್ಲಿ ಶೇಖರಣೆ ಮಾಡಿ ನೀರನ್ನು ಶುದ್ಧೀಕರಣ ಮಾಡದೇ ಮೇಲಿನ ಕುರುವಳ್ಳಿ, ಗ್ರಾಮದ ಜನರಿಗೆ ಕುಡಿಯುವ ನೀರು ಎಂದು ಮನೆ ಮನೆಗೆ ಬಿಡುತ್ತಿದ್ದಾರೆ. ಈ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ದಿಸೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನಿದ್ದೆ ಮಂಪರುವಿನಿಂದ ಎದ್ದು ಯಾರು ಈ ತ್ಯಾಜ್ಯವನ್ನು ಹಾಕುವುದು ಎಂದು ಕಂಡು ಹಿಡಿದು ತಕ್ಷಣ  ಕೋಳಿ ಅಂಗಡಿಯವರಿಂದ ತ್ಯಾಜ್ಯವನ್ನು ಹಳ್ಳಕ್ಕೆ ಹಾಕುವುದಕ್ಕೆ ಕಡಿವಾಣ ಹಾಕಲಿ. ಇಲ್ಲದೇ ಹೋದಲ್ಲಿ ತುಂಗಾ ನದಿಯ ನೀರು ಮಲಿನವಾಗುವುದರ ಜೊತೆಗೆ ಈ ಕಲುಷಿತ ನೀರು ಕುಡಿದು ರೋಗರುಜಿನ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

✍: ಶ್ರೀಕಾಂತ್.ವಿ.ನಾಯಕ ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು