ವೈಭವಯುತವಾಗಿ ನೆರವೇರಿದ ನಾಡಹಬ್ಬ ದಸರಾ ಮೆರವಣಿಗೆ: ಬನ್ನಿ ಮುಡಿದ ತಹಸೀಲ್ದಾರ್ ಪ್ರದೀಪ್

 

ವಿಜಯ ಸಂಘರ್ಷ



ಭದ್ರಾವತಿ: ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಮೆರವಣಿಗೆ ವೈಭವಯುತ ವಾಗಿ ನಡೆಯಿತು.

ನಗರದ ಲೋಯರ್‌ಹುತ್ತಾ ಶ್ರೀ ತಿರುಮಲ ದೇವಸ್ಥಾನದ ಬಳಿ ಶಾಸಕ ಬಿ.ಕೆ ಸಂಗಮೇಶ್ವರ್ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಲೋಯರ್ ಹುತ್ತದಿಂದ ಸಾಗಿದ ಮೆರವಣಿಗೆಯಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ, ಕೆರೆಕೋಡಮ್ಮ, ಅಂತರ ಘಟ್ಟಮ್ಮ, ಕಾಳಿಕಾಂಬ, ವಿಶ್ವಸ್ವರೂ ಪಿಣಿ ಮಾರಿಯಮ್ಮ, ಏಳುಕೋಟಿ ಮೈಲಾರಲಿಂಗೇಶ್ವರ, ಸಿಗಂದೂರು ಚೌಡೇಶ್ವರಿ, ಸವದತ್ತಿ ಯಲ್ಲಮ್ಮ, ದುರ್ಗಾ ಪರಮೇಶ್ವರಿ, ಎಲ್ಲಮ್ಮ ದೇವಿ. ಕುಕ್ಕುವಾಡೇಶ್ವರಿ ಸೇರಿದಂತೆ ವಿವಿಧೆಡೆಗಳಿಂದ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತುಂಬಿತ್ತು.

ತಾಲೂಕು ಆರೋಗ್ಯ ಇಲಾಖೆ ಮತ್ತು ನಗರಸಭೆ ವತಿಯಿಂದ ಕೊರೋನಾ ಸೋಂಕು ಜಾಗೃತಿ ಹಾಗು ಸ್ವಚ್ಚತೆ ಅರಿವು ಮೂಡಿಸುವ ಸ್ತಬ್ದ ಚಿತ್ರ, ಮಹಿಷಾಸುರ ಮರ್ದಿನಿ ಸ್ತಬ್ದ ಚಿತ್ರ, ಡೊಳ್ಳುಕುಣಿತ, ವೀರಗಾಸೆ, ಕೋಲಾಟ, ಗೊಂಬೆಗಳು, ಲಂಬಾಣಿ ನೃತ್ಯ, ಕೀಲು ಕುದುರೆ, ಯಕ್ಷಗಾನ ಗೊಂಬೆಗಳ ತಂಡಗಳು ನೋಡುಗರ ಕಣ್ಮನ ಸೆಳೆದವು.

ಮೆರವಣಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಡಾ. ರಾಜಕುಮಾರ ರಸ್ತೆ, ಹಾಲಪ್ಪವೃತ್ತ, ಮಾಧವಚಾರ್,ರಂಗಪ್ಪ ವೃತ್ತ ಮೂಲಕ ಕನಕ ಮಂಟಪ ಮೈದಾನ ತಲುಪಿತು.

ಹಳೇನಗರದ ಕನಕಮಂಟಪ ಮೈದಾನದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಧಾರ್ಮಿಕ ಆಚರಣೆ ಗಳೊಂದಿಗೆ ಬನ್ನಿ ಮುಡಿಯುವ ಮೂಲಕ ನಾಡಹಬ್ಬಕ್ಕೆ ತೆರೆ ಎಳೆದರು. ಕೊನೆಯಲ್ಲಿ ಪಟಾಕಿ ಸಿಡಿಮದ್ದುಗಳ ಮೂಲಕ ರಾವಣನ ಸಂಹಾರ ನಡೆಯಿತು. ಹಳೇನಗರದ  ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥಶರ್ಮ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು.

ನಗರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ಸದಸ್ಯರು, ಪೌರಾಯುಕ್ತ ಕೆ. ಪರಮೇಶ್, ಆರ್.ಓ. ರಾಜ್‌ಕುಮಾರ್, ಅಧಿಕಾರಿಗಳಾದ ಪ್ರಭಾಕರ್, ಸುಹಾಸಿನಿ, ಟಿಎಚ್ ಓ, ಡಾ.ಎಂ.ವಿ ಆಶೋಕ್, ಪ್ರಶಾಂತ್, ಸರ್ಕಾರಿ ಇಲಾಖೆಗಳ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿಗಳು ಪೌರಕಾರ್ಮಿಕರು, ಮುಖಂಡರಾದ ಹಾ.ರಾಮಪ್ಪ, ನರಸಿಂಹಚಾರ್, ನಗರದ ವಿವಿಧೆಡೆಗಳಿಂದ ನೂರಾರು ಮಂದಿ ಪಾಲೊಂಡಿದ್ದರು.

ಮಳೆ ಇಂದು ವಿರಾಮ ನೀಡಿದ್ದರಿಂದ ಕಾರ್ಯಕ್ರಮ ಯಾವ ಅಡಚಣೆ ಇಲ್ಲದೆ ನೆರವೇರಿತು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು