ವಿಜಯ ಸಂಘರ್ಷ
ಶಿವಮೊಗ್ಗ: ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರು ದುರ್ಬಳಕೆ ಮಾಡಿ ಕೊಂಡು ಲಕ್ಷಾಂತರ ರೂ. ವಂಚಿಸಿರುವ ಐವರ ಆರೋಪಿಗಳ ವಿರುದ್ಧ ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರ ಪೈಕಿ, ಇಬ್ಬರನ್ನು ಬಂಧಿಸಲಾಗಿದ್ದು, ಮೂವರಿಗೆ ಶೋಧ ಕಾರ್ಯ ನಡೆಯುತ್ತಿದೆ.
ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವರಿಗೆ ವಿಲ್ಲಾ ಪ್ರಾಜೆಕ್ಟ್ಗಾಗಿ 100 ಕೋಟಿ ರೂ. ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ಇದಕ್ಕಾಗಿ ಐವರು ಆರೋಪಿಗಳು 10 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
106 ವಾಟರ್ ಆರ್.ಒ. ಪ್ಲಾಂಟ್ ಕೊಡಿಸುವುದಾಗಿ ಶಿವಮೊಗ್ಗದ ಗುತ್ತಿಗೆದಾರ ಲಕ್ಷ್ಮಣ್ ಎಂಬುವರಿಗೆ ವಂಚಿಸಲಾಗಿದೆ. ಲಕ್ಷ್ಮಣ್ ಅವರಿಂದ 26.25 ಲಕ್ಷ ರೂ. ಹಣ ಪಡೆದುಕೊಂಡು ವಂಚನೆ ಮಾಡಲಾಗಿದೆ. ಆರ್.ಒ ಪ್ಲಾಂಟ್ ಕೊಡಿಸದೇ ಇದ್ದಾಗ, ಹಣ ಕೇಳಿದಾಗ ಲಕ್ಷ್ಮಣ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಬೇಸತ್ತ ಲಕ್ಷ್ಮಣ್ ಅವರು ಎಸ್ಪಿ ಲಕ್ಷ್ಮಿ ಪ್ರಸಾದ್ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿ ದ್ದಾರೆ. ಬಳಿಕ ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಈ ಎರಡು ಪ್ರಕರಣದಲ್ಲಿ ಐವರು ಆರೋಪಿಗಳು ತಾವು ಸಚಿವ ಈಶ್ವರಪ್ಪ ಅವರ ಆಪ್ತರು ಎಂದು ಬಿಂಬಿಸಿ ಕೊಂಡಿದ್ದಾರೆ. ಇದನ್ನು ನಂಬಿ ಮೈಸೂರಿನ ರಾಜೇಶ್ ಮತ್ತು ಶಿವಮೊಗ್ಗದ ಲಕ್ಷ್ಮಣ್ ಅವರು ಹಣ ನೀಡಿದ್ದಾರೆ. ಎರಡು ಪ್ರಕರಣದಲ್ಲಿ ವಿಠಲ ರಾವ್, ಮೊಹಮ್ಮದ್ ಮುಫಾಸಿರ್, ಮಂಜುನಾಥ, ಕಾಜಿವಲೀಸ್, ಮೊಹಮ್ಮದ್ ರೆಹಮಾನ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಮೂವರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795