ನಾನಾ ಬೇಡಿಕೆ ಈಡೇರಿಕೆ ಆಗ್ರಹಿಸಿ ನಗರಸಭಾಧ್ಯಕ್ಷರಿಗೆ ಮನವಿ

 

ವಿಜಯ ಸಂಘರ್ಷ



ಭದ್ರಾವತಿ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ರಾಜ್‌ ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಶನಿವಾರ ಸಲ್ಲಿಸಲಾಯಿತು.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲವೆಡೆ ಕಾಮಗಾರಿ ಮುಕ್ತಾಯಗೊಂಡಿದ್ದರೂ ಸಹ ಮನೆಗಳಿಗೆ ಒಳಚರಂಡಿ ಸಂಪರ್ಕದ ಸೌಲಭ್ಯ ಕಲ್ಪಿಸಿಲ್ಲ.  ಇನ್ನೂ ಕೆಲವು ಭಾಗಗಳಲ್ಲಿ ಕೊಳವೆಗಳ ಜೋಡಣೆ ಕಾಮಗಾರಿ ಕೈಗೊಳ್ಳದ ಕಾರಣ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ತುರ್ತು ಸಭೆ ಕರೆದು ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ನಗರದ ಜನ್ನಾಪುರ ಕರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಈಗಾಗಲೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ್ ಪ್ರಕ್ರಿಯೆ ಮುಗಿದ್ದಿದ್ದು, ಅಭಿವೃದ್ಧಿ ಕಾಮಗಾರಿ ಗಳು ನಡೆಯಲು ಕೆಲವು ತಾಂತ್ರಿಕ ತೊಂದರೆ ಇರುವುದರಿಂದ ಈ ಸಂಬಂಧ ಸಹ ತುರ್ತು ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 70 ಕೆರೆಗಳಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರು. ಉಳಿತಾಯ ವಾಗುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಸಮೀಪವಿರುವ ರೈತರಿಗೆ ಕೆರೆಗಳ ಹೂಳು ತೆಗೆಯಲು ಅನುಮತಿ ನೀಡುವಂತೆ ಆಗ್ರಹಿಸಲಾಗಿದೆ.

ನಗರಸಭೆಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಗಣಕಯಂತ್ರ ನಿಯೋಜಕರಿಗೆ ಸೇವಾ ಭದ್ರತೆಯ ದೃಷ್ಟಿಯಿಂದ ಹಾಗು ಕುಟುಂಬ ನಿರ್ವಹಣೆಯ ದೃಷ್ಟಿಯಿಂದ ಅವರಿಗೂ ಸಹ ಪಿ.ಎಫ್, ಇ.ಎಸ್.ಐ ಸೌಲಭ್ಯ ಕಲ್ಪಿಸಿ ಕೊಡುವ ಜೊತೆಗೆ ನಗರಸಭೆ ವತಿ ಯಿಂದಲೇ ವೇತನ ಪಾವತಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ವೇದಿಕೆ ಮುಖಂಡರಾದ ವೆಂಕಟೇಶ್, ಸದಸ್ಯರಾದ ಬಿ.ಕೆ ಮೋಹನ್, ಸರ್ವಮಂಗಳರಮಾ ಭೈರಪ್ಪ, ಶೃತಿ ವಸಂತ್, ಅನುಸುಧ ಮೋಹನ್, ಕಾಂತರಾಜ್, ಟಿಪ್ಪು ಸುಲ್ತಾನ್, ರವಿಕುಮಾರ್ ಮತ್ತಿತರರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು