ವಿಜಯ ಸಂಘರ್ಷ
ಭದ್ರಾವತಿ: ದಸರಾ ಹಬ್ಬ ಯಶಸ್ವಿಗಾಗಿ ದೇವಾಲಯ ಸಮಿತಿಗಳು ಸಹಕರಿಸು ವಂತೆ ತಹಸೀಲ್ದಾರ್ ಆರ್.ಪ್ರದೀಪ್ ಇಂದು ನಗರಸಭೆ ಸಭಾಂಗಣದಲ್ಲಿ ಮನವಿ ಮಾಡಿದರು.
ನಾನಾ ದೇವಸ್ಥಾನಗಳ ಸೇವಾ ಸಮಿತಿಗಳೊಂದಿಗೆ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಗಳಂತೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಸಬೇಕು. ಸೀಮಿತ ವ್ಯಾಪ್ತಿಯಲ್ಲಿ ಹಬ್ಬ ಆಚರಿ ಸಲು ನಗರಸಭೆ ಆಡಳಿತ ಸಿದ್ದತೆಗಳನ್ನು ಕೈಗೊಂಡಿದೆ. ದೇವಸ್ಥಾನ ಸಮಿತಿಗಳು ಸ್ಪಂದಿಸುವ ಮೂಲಕ ಮೆರವಣಿಗೆಗೆ ಮೆರಗು ನೀಡಬೇಕೆಂದರು.
ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ ಮಾತನಾಡಿ, ದೇವಸ್ಥಾನ ಸೇವಾ ಸಮಿತಿಗಳು ಜನಸಂದಣಿ ಹೆಚ್ಚಾಗದಂತೆ ಎಚ್ಚರವಹಿಸಬೇಕು. ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಬೇಕು. ಬನ್ನಿ ಮುಡಿಯುವ ಜಾಗದಲ್ಲಿ ಜಾಗೃತಿ ವಹಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸಿಕೊಡ ಬಾರದು. ನಿಗದಿಪಡಿಸಿರುವ ಆಯಾ ಸ್ಥಳಗಳಲ್ಲೇ ಸಮಿತಿಗಳು ಇರತಕ್ಕದ್ದು. ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಕಳೆದ ೨ ಎರಡು ವರ್ಷಗಳಿಂದ ಕೊರೋನಾ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಬರುವ ಆದಾಯ ಸಹ ಕುಂಠಿತಗೊಂಡಿದೆ. ಈ ನಡುವೆಯೂ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿವೆ. ನಗರಸಭೆ ಆಡಳಿತ ಗೌರವಧನ ಹೆಚ್ಚು ಮಾಡಿದ್ದಲ್ಲಿ ಇನ್ನೂ ಹೆಚ್ಚಿನ ಅಲಂಕಾರದೊಂದಿಗೆ ದೇವಾನುದೇವಾತೆಗಳು ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದು ವಿವಿಧ ದೇವಸ್ಥಾನಗಳ ಪ್ರಮುಖರು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಮಾತನಾಡಿ, ಕಳೆದ ವರ್ಷ ದಸರಾ ಹಬ್ಬ ಯಶಸ್ವಿಯಾಗಿ ನಡೆದಿದೆ. ಆದರೆ ಖರ್ಚು ಮಾಡಿರುವ ಹಣ ಇದುವರೆಗೂ ಬಿಡುಗಡೆಗೊಂಡಿಲ್ಲ. ಇದೀಗ ನಗರಸಭೆ ವತಿಯಿಂದ ಅದ್ದೂರಿಯಾಗಿ ಆಚರಿಸಲು ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ಎದುರಾಗಿದೆ. ಆದರೂ ಸಹ ಸೀಮಿತ ಅನುದಾನದಲ್ಲಿಯೇ ಸಾಧ್ಯವಾದಷ್ಟು ಎಲ್ಲರಿಗೂ ಸಮಾಧಾನಕರವಾಗುವ ನಿಟ್ಟಿನಲ್ಲಿ ಆಚರಿಸಬೇಕೆಂಬ ಆಶಯ ನಮ್ಮದಾಗಿದೆ. ಸಾಧ್ಯವಾದಷ್ಟು ಹೆಚ್ಚಿನ ಗೌರವಧನ ನೀಡುವುದಾಗಿ ತಿಳಿಸಿದರು.
ಆರ್.ಓ. ಎಂ.ಎಸ್ ರಾಜ್ಕುಮಾರ್, ಪರಿಸರ ಇಂಜಿನಿಯರ್ ಪ್ರಭಾಕರ್, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ ವೇದಿಕೆಯಲ್ಲಿದ್ದರು. ನಗರದ ವಿವಿದ ದೇವಸ್ಥಾನಗಳ ಸೇವಾ ಸಮಿತಿ ಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795