ವಿಜಯ ಸಂಘರ್ಷ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದರು.
ಪುನೀತ್ ಆರೋಗ್ಯದಲ್ಲಿ ಏರು ಪೇರಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬೆಳಿಗ್ಗೆ ಎಂದಿನಂತೆ ಜಿಮ್ ವರ್ಕ್ ಔಟ್ ಮಾಡುವ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು.
ಡಾ.ರಾಜ್ ಕುಮಾರ್ ಕುಟುಂಬದ ತಜ್ಞ ವೈದ್ಯ ಡಾ.ರಮಣ ಅವರ ಬಳಿ ತಕ್ಷಣವೆ ಕರೆದುಕೊಂಡು ಹೋಗಲಾಯಿತು. ವೈದ್ಯರ ಸಲಹೆ ಮೇರೆಗೆ ತಕ್ಷಣವೆ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಐಸಿಯುನಲ್ಲಿ ಚಿಕಿತ್ಸೆ ನೀಡಿದ್ರೂ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಅತಿಯಾದ ವರ್ಕ್ ಔಟ್ ಹಾಗೂ ಡಯಟ್ ಮಾಡುತ್ತಿರುವುದು ಪುನೀತ್ ರಾಜ್ ಕುಮಾರ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದು ಎಂದು ತಿಳಿದು ಬಂದಿದೆ.
ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ರಾಜ್ ಕುಟಂಬದ ಆಕ್ರಂದನ ಹೇಳ ತೀರದಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಶಿವರಾಜ್ ಕುಮಾರ್ ಸೇರಿದಂತೆ ಅವರ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದರು.
ಅಲ್ಲದೆ ಸ್ಯಾಂಡಲ್ ವುಡ್ ನ ನಟ-ನಟಿಯರ ದಂಡು ಹಾಗೂ ಅಪಾರ ಅಭಿಮಾನಿಗಳ ಬಳಗ ಆಸ್ಪತ್ರೆಯಲ್ಲಿ ಜಮಾಯಿಸಿತು. ಪುನೀತ್ ರನ್ನು ಕಳೆದುಕೊಂಡ ಕಂಬನಿಗೈಯ್ದರು.
ಪುತ್ರಿ ಅಮೇರಿಕಾದಲ್ಲಿ ಇದ್ದು, ಅವರಿಗೂ ಈ ವಿಚಾರ ತಿಳಿಸಿದ್ದು, ಅವರು ಕೂಡ ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ.
ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಮಧ್ಯಾಹ್ನದ ನಂತರ ವಿಕ್ರಂ ಆಸ್ಪತ್ರೆಯಿಂದ ಸ್ಟೇಡಿಯಂಗೆ ಅವರ ಪಾರ್ಥಿವ ಶರೀರ ತರಲಾಗುವುದು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795