ವಿಜಯ ಸಂಘರ್ಷ
ತೀರ್ಥಹಳ್ಳಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಡ ಜನರ ಏಳಿಗೆ ರಾಮ ರಾಜ್ಯದ ಕನಸು ಕಂಡಿದ್ದರು. ಅದನ್ನು ಸಕಾರಗಳಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಹುಟ್ಟು ಹಾಕಿದ್ದರ ಫಲವಾಗಿ ರಾಜ್ಯದಾದ್ಯಂತ ಈ ಯೋಜನೆಯಿಂದ ಬಡವರು ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದಾರೆ. ಇದರ ಜೊತೆಯಲ್ಲಿ ಸಂಘದ ಸದಸ್ಯರು ದುಶ್ಚಟಗಳನ್ನು ದೂರ ಮಾಡಲು ಮದ್ಯ ವರ್ಜನ ಶಿಬಿರ ಹಮ್ಮಿಕೊಂಡು ಲಕ್ಷಾಂತರ ಕುಟುಂಬಗಳು ಅದರ ಪ್ರಯೋಜನ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಇಂತಹ ಮಹತ್ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿದರೆ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಇಂದು ಪಟ್ಟಣದ ಮಾಧವ ಮಂಗಲ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜೆಸಿ ಟ್ರಸ್ಟ್ , ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಗಾಂಧಿ ಸ್ಮೃತಿ ಹಾಗೂ ದುಶ್ಚಟಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಬಾಪೂಜಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದ ಅವರು ದುಶ್ಚಟಗಳನ್ನು ಪ್ರಾರಂಭಿಸುವ ಮೊದಲು ಆರೋಗ್ಯ ನನ್ನ ಕುಟುಂಬದ ಬಗ್ಗೆ ಸರಿಯಾದ ತಿಳುವಳಿಕೆ ಅರಿತು ಕೊಳ್ಳಬೇಕಾಗುತ್ತದೆ. ಮದ್ಯಪಾನ ಕುಟುಂಬದ ನೆಮ್ಮದಿ ಹಾಳು ಮಾಡಿದರೆ ಧೂಮಪಾನ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ಇವರೆಡನ್ನೂ ದೂರ ಮಾಡಲು ಧರ್ಮಸ್ಥಳ ಯೋಜನೆಯವರು ಮದ್ಯ ವರ್ಜನ ಶಿಬಿರದಂತಹ ಮಹತ್ಕಾರ್ಯ ಆಯೋಜಿಸಿದರ ಫಲವಾಗಿ ಲಕ್ಷಾಂತರ ಕುಟುಂಬಗಳು ನೆಮ್ಮದಿ ವಾತಾವರಣ ದಿಂದ ಸುಂದರ ಬದುಕು ರೂಪಿಸಿ ಕೊಂಡಿದ್ದಾರೆ. ಧರ್ಮಸ್ಥಳ ಯೋಜನೆಯ ಇಂತಹ ದೊಡ್ಡ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿ ಸ್ವಸ್ಥ ಸಮಾಜ ಕಟ್ಟುವಲ್ಲಿ ಸಹಕರಿಸಿ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆಯ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ ಕಳೆದ ಹನ್ನೆರಡು ವರ್ಷಗಳಿಂದ ಹಮ್ಮಿಕೊಂಡು ಬಂದಿರುವ ಮದ್ಯ ವರ್ಜನ ಶಿಬಿರದ ಫಲಾನುಭವಿಗಳು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಮಾದರಿ ಮದ್ಯವರ್ಜನ ಶಿಬಿರ ಆಯೋಜಿಸಿ ಇದಕ್ಕೆ ಜನ ಜಾಗೃತಿ ವೇದಿಕೆ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಡಾ. ಮುರುಳೀಧರ್ ಕಿರಣ್‌ಕೆರೆ ಮಾತನಾಡಿ ಕೋವಿಡ್-19 ರ ಪ್ರಯುಕ್ತ ಕಳೆದೆರೆಡು ವರ್ಷಗಳಿಂದ ಮದ್ಯವರ್ಜನ ಶಿಬಿರಗಳನ್ನು ನಿಲ್ಲಿಸಲಾಗಿದೆ. ಶಿಬಿರ ಸೇರುವ ಬಗ್ಗೆ ಹಲವರು ಕರೆ ಮಾಡುತ್ತಾರೆ ಶಿಬಿರ ಸೇರಿ ಮದ್ಯವರ್ಜನ ತ್ಯಜಿಸುವ ಕಾರ್ಯವನ್ನು ಮಾಡುವುದಕ್ಕಿಂತ ಸ್ವಯಂ ಪ್ರೇರಿತ ದುಶ್ಚಟ ತ್ಯಜಿಸುವ ಕೆಲಸ ಮಾಡಿ ಎಂದರು.
ಪೂಜ್ಯಪಾದ ಚಿಕಿತ್ಸಾಲಯದ ವೈದ್ಯ ಡಾ. ಜೀವಂಧರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಶ್ಚಟವೆಂಬುದು ನಮ್ಮ ಆಯಸ್ಸು ಕಡಿಮೆ ಮಾಡಿಕೊಳ್ಳುವ ಪ್ರಥಮ ಹೆಜ್ಜೆ. ದುಶ್ಚಟ ಅಂಟಿಸಿಕೊಂಡವನು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿಲ್ಲ. ದುಶ್ಚಟ ಎಂಬ ಮಾರಣಾಂತಿಕ ರೋಗವನ್ನು ಹೊಡೆದೋಡಿಸಲು ಕ್ಷೇತ್ರದ ಧರ್ಮಾಧಿಕಾರಿಗಳು ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದು ಎಲ್ಲ ಪೂಜ್ಯರು ಹಾಕಿ ಕೊಟ್ಟ ನವ ಭಾರತ ನಿರ್ಮಾಣದ ನವಜೀವನದತ್ತ ಸಾಗೋಣ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವತಿಯಿಂದ ದುಶ್ಚಟ ಮುಕ್ತ ಕುಟುಂಬ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಗೃಹ ಮಂತ್ರಿ ಆರಗ ಜ್ಞಾನೇಂದ್ರರವರಿಗೆ ಮನವಿ ಸಲ್ಲಿಸಿದರು. ಈ ಸಮಾರಂಭದಲ್ಲಿ ನವಜೀವನ ಸಮಿತಿಯ ಸದಸ್ಯರ ಯಶೋಗಾಥೆ ಹಾಗೂ ಸಾಧಕ ನವಜೀವನ ಸಮಿತಿ ಸದಸ್ಯರುಗಳಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಡಿವೈಎಸ್‌ಪಿ ಶಾಂತರಾಜ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕುರಿಯಾ ಕೋಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹೇಮಲತಾ, ಅಶೋಕ್ ಮೂರ್ತಿ, ಮೇಗರವಳ್ಳಿ ಮುದ್ದಣ್ಣ, ನಾಲೂರು ಶ್ರೀಕಂಠ, ಈರೇಗೋಡು ಸದಾನಂದ, ಕೂಳೂರು ಸತ್ಯನಾರಾಯಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
✍🏻ವರದಿ: ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795