ವಿಜಯ ಸಂಘರ್ಷ
ಭೂ
ತಃಕಾಲದ ಅಲಿಖಿತ ಸಂವಿಧಾನ ಮತ್ತು ವರ್ತಮಾನದ ಸಂವಿಧಾನದ ನಡುವೆ ಸಂಘರ್ಷ: ಡಾ. ತುಕಾರಾಮ್
ಭದ್ರಾವತಿ: ಭೂತಃಕಾಲದ ಅಲಿಖಿತ ಮತ್ತು ವರ್ತಮಾನದ ಸಂವಿಧಾನದ ಆಶಯಗಳ ನಡುವೆ ಸಂಘರ್ಷ ನಡೆಯುತ್ತಿದೆ. ಅಧಿಕಾರಶಾಹಿಯ ಹಿಡಿತದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ ದಲಿತರು, ಬುಡಕಟ್ಟು ಜನಾಂಗಗಳು, ಅಲೆಮಾರಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ತಬ್ಬಲಿತನ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ಮಾಜಿ ನಿರ್ದೇಶಕ ಡಾ. ಎಸ್. ತುಕಾರಾಮ್ ಕಳವಳ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಸಹಾಯಕರಿಗೆ ನೆರವು ನೀಡುವುದು, ಬಹುಸಂಸ್ಕೃತಿಯನ್ನು ಉಳಿಸುವುದು, ಸಮಾನತೆಯನ್ನು ಕಾಯ್ದುಕೊಳ್ಳುವುದು, ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗೌರವಿಸುವುದು ಸಂವಿಧಾನದ ಆಶಯ. ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕೂಡ ಹಿಂಜರಿಯುವ ತುರ್ತುಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಒಟ್ಟಾರೆ ಪ್ರತ್ಯೇಕತೆಯ ವಾತಾವರಣ ಮನೆಮಾಡುತ್ತಿದ್ದು, ಸಾಮಾಜಿಕ ಅಂತರ್ ಸಂಬಂಧಗಳೇ ಬಿಕ್ಕಟ್ಟಿನಲ್ಲಿದೆ ಎಂದು ವಿಷಾದಿಸಿದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಸಂವಿಧಾನ ರಚನೆಯ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆಯ ಜೊತೆಗೆ ಗಾಂಧೀಜಿ, ಠಾಗೋರ್, ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್‌ರಂತಹ ನಾಯಕರ ಆಲೋಚನೆಗಳು ಮತ್ತು ಒಟ್ಟಾರೆ ಬಹುಸಂಸ್ಕೃತಿಯ ಭಾರತೀಯರ ಸಮಗ್ರ ಆಶಯ ಕೆಲಸ ಮಾಡಿದೆ. ಆದ್ದರಿಂದ ಸಮಾನತೆ, ಭ್ರಾತೃತ್ವ, ಧರ್ಮನಿರಪೇಕ್ಷತೆ, ಮತ್ತು ಬಹುಸಂಸ್ಕೃತಿಗಳೆಡೆಗೆ ಸಹಿಷ್ಣುತೆಯನ್ನು ಇನ್ನಾದರೂ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
ಕುಲಸಚಿವರಾದ ಜಿ. ಅನುರಾಧ ಮಾತನಾಡಿ, ಸಂವಿಧಾನ ಸರ್ವರಿಗೂ ಸಮಾನ ಅವಕಾಶ ಒದಗಿಸಿದೆ. ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ಓರ್ವ ಭಾರತೀಯ ತನ್ನಿಚ್ಛೆಯ ಕ್ಷೇತ್ರದಲ್ಲಿ ನಿರ್ಭಿಡೆಯಿಂದ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸಲು ಶಿಕ್ಷಣ ಅತ್ಯಂತ ಪ್ರಮುಖವಾದುದು ಎಂಬ ಅಂಶವನ್ನು ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಡಬೇಕು ಎಂದು ಸಲಹೆ ನೀಡಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್, ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಿ. ಎಚ್. ಆಂಜನಪ್ಪ, ವಿವಿಧ ವಿಭಾಗಗಳ ಪ್ರಾಧ್ಯಾಪಕರುಗಳು, ಬೋಧಕೇತರ ಸಿಬ್ಬಂದಿ, ವಿವಿ ವಿದ್ಯಾರ್ಥಿಗಳ ಜೊತೆಗೆ ಶ್ರೀಮದ್ ರಂಭಾಪುರಿ ಮತ್ತು ಎನ್‌ಇಎಸ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795