ವಿಜಯ ಸಂಘರ್ಷ
ಭದ್ರಾವತಿ: ಸಮಾಜದಲ್ಲಿ ನಮ್ಮ ನಡವಳಿಕೆಗಳು, ಮಾಡುವ ಸೇವಾ ಕಾರ್ಯಗಳು ನಮಗೆ ಅರಿವಿಲ್ಲದಂತೆ ನಮ್ಮನ್ನು ಸಮಾಜ ಗುರುತಿಸುವಂತೆ ಮಾಡುತ್ತವೆ ಎಂದು ಆನಂದಪುರಂ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶ್ರೀಗಳು ತಾಲೂಕಿನ ಬಿಳಕಿ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ 45 ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ದಾಂಜಲಿ ಹಾಗು ಜಿಲ್ಲಾ ವೀರಶೈವ ಮಠಾಧೀಶರ ಪರಿಷತ್ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪುನೀತ್ ರಾಜ್‌ಕುಮಾರ್‌ರವರು ಕೇವಲ ಚಿತ್ರನಟರಾಗಿ ಉಳಿಯದೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ ವೈಯಕ್ತಿಕವಾಗಿ ಉತ್ತಮ ನಡವಳಿಕೆ ಗಳನ್ನು ಮೈಗೂಡಿಸಿ ಕೊಂಡಿದ್ದರು. ಜೊತೆಯಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡಿ ದ್ದರು. ಈ ಹಿನ್ನಲೆಯಲ್ಲಿ ಅವರನ್ನು ಇಂದು ಎಲ್ಲರೂ ಸ್ಮರಿಸುತ್ತಾರೆ ಎಂದರು.
ಕುಪ್ಪೂರು ಶ್ರೀ ಯತೀಶ್ವರ ಶಿವಾ ಚಾರ್ಯ ಸ್ವಾಮೀಜಿ ನಿಧನ ಸಹ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಶ್ರೀಗಳ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.
ಶಿವಮೊಗ್ಗ ಜಿಲ್ಲಾ ಮಲೆನಾಡು ವೀರಶೈವ ಲಿಂಗಾಯಿತ ಮಠಾಧೀಶರ ಪರಿಷತ್ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಮಾರ್ಗದರ್ಶನ ನೀಡುವ ಜೊತೆಗೆ ಸಮಾಜ ಸೇವೆ ಮಾಡುವ ಗುರಿ ಹೊಂದಿ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಪರಿಣಾಮ ಮಲೆನಾಡು ಅಭಿವೃಧ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಸ್ತುತ ಪರಿಷತ್ತಿನಲ್ಲಿ 29 ಶಿವಾಚಾರ್ಯರು ಸದಸ್ಯತ್ವ ಹೊಂದಿದ್ದು, ಮುಂದೆ ಸಹ ಪರಿಷತ್ ಇನ್ನೂ ಹೆಚ್ಚಿನ ರೀತಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪರಿಷತ್‌ನಲ್ಲಿ ಕ್ರಿಯಾಶೀಲರಾಗಿ ರುವುದರ ಜೊತೆಗೆ ಮಠದ ಅಭಿವೃಧ್ಧಿಗೆ ಕಾರಣಕರ್ತರಾಗಿದ್ದಾರೆ. ಮಠಮಾನ್ಯಗಳು ಸಮಾಜದಲ್ಲಿ ಉತ್ತಮ ಕಾರ್ಯಗಳು ನಡೆಯಲು ವೇದಿಕೆಯಾಗಿವೆ ಎಂದರು.
ನಗರಸಭೆ ನೂತನ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಅನುಪಮ ಚನ್ನೇಶ್ ಮತ್ತು ಬಿ.ಎಂ ಮಂಜುನಾಥ್ ಹಾಗು ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಉಪಾಧ್ಯಕ್ಷ ಡಿ.ಎಂ.ವಿಶ್ವನಾಥ್, ಕಾರ್ಯದರ್ಶಿ ಉದಯ ಕುಮಾರ್, ಸಹ ಕಾರ್ಯ ದರ್ಶಿ ಮಂಜಪ್ಪ ಹಾಗು ಕಥಾ ಬಿಂದು ಸೌರಭ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಡೆಯೂರು ಶ್ರೀ ರೇಣುಕ ಶಿವಾ ಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿಮಠದ ಶ್ರೀ ಗುರು ಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಬಿಳಕಿ ಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795