ಆರೋಗ್ಯ ಸದೃಢವಾಗಿರಲು ಹೆಚ್ಚಿನ ಕಾಳಜಿವಹಿಸಿ: ಸುರಜಿತ್ ಮಿಶ್ರ

 

ವಿಜಯ ಸಂಘರ್ಷ



ಭದ್ರಾವತಿ:  ನಾವುಗಳು ಸದಾ ಕಾಲ ಸದೃಢವಾಗಿರಲು ಆರೋಗ್ಯದ ಹೆಚ್ಚಿನ ಕಾಳಜಿ ವಹಿಸಬೇಕೆಂದು ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಕರೆ ನೀಡಿದರು.

ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಆರೋಗ್ಯದ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ಇದನ್ನು ಅರಿತುಕೊಂಡು ಆರೋಗ್ಯದ ಬಗ್ಗೆನಿರ್ಲಕ್ಷ್ಯತನ ವಹಿಸದೆ ಜಾಗೃತಿ ವಹಿಸಬೇಕೆಂದರು.

ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಮತ್ತು ಕುಟುಂಬ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

 ವಿಐಎಸ್‌ಎಲ್ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವ್ಯದ್ಯಾಧಿಕಾರಿ ಡಾ. ಎಂ.ವೈ ಸುರೇಶ್ ಮಾತನಾಡಿ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದರು.

ಕಾರ್ಖಾನೆಯ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾಪ್ರಬಂಧಕ ಪಿ.ಪಿ ಚಕ್ರವರ್ತಿ, ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ನೇತೃತ್ವದ ತಾಲೂಕು ಸರ್ಕಾರಿ ಆಸ್ಪತ್ರೆಯ ದಂತ ವೈದ್ಯರಾದ ಡಾ. ರಶ್ಮಿ, ಡಾ. ಮಯೂರಿ, ಸಮಾಲೋಚಕರಾದ ಶ್ರೀದೇವಿ, ಪ್ರಭಾವತಿ, ಪ್ರಯೋಗಾಲಯ ತಂತ್ರಜ್ಞ ರಘುವೀರ್, ಆಶಾ ಕಾರ್ಯಕರ್ತೆಯರಾದ ಕವಿತಾ, ನೀಲಾಂಬಿಕ, ಶಾಹೀನ್ ಮತ್ತು ಆರೋಗ್ಯ ಮೇರಿ ಅವರನ್ನೊಳಗೊಂಡ ತಂಡ ಆರೋಗ್ಯ ತಪಾಸಣೆ ನಡೆಸಿತು.

ಮಧುಮೇಹ, ರಕ್ತದೊತ್ತಡ ಮತ್ತು ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಸುಮಾರು 270 ಮಂದಿ ಪಾಲ್ಗೊಂಡು ಆರೋಗ್ಯ ತಪಾಸಣೆ ಸದುಪಯೋಗ ಪಡೆದುಕೊಂಡರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು