ಭದ್ರಾವತಿ ವಿಜಯ ಸಂಘರ್ಷ
ಭದ್ರಾವತಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪ್ರಸ್ತುತ ಲಾಭದತ್ತ ಸಾಗುತ್ತಿದೆ, ಇದೀಗ ಬಂಡವಾಳ ತೊಡಗಿಸುವ ಅಗತ್ಯ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಸಹಕರಿಸುವಂತೆ ಕಾರ್ಖಾನೆಯ ಕಾರ್ಮಿಕ ಸಂಘ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಮಾಡಲಾಗಿದೆ.
ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಪದಾಧಿಕಾರಿಗಳು ಶಿವಮೊಗ್ಗದ ಸಂಸದರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದು, ಮೈಸೂರು ಸಂಸ್ಥಾನ 1918ರಲ್ಲಿ ಆರಂಭಿಸಿದ ಮೈಸೂರು ವುಡ್ ಡಿಸ್ಟಿಲರಿ ವರ್ಕರ್‍ಸ್ ಲಿಮಿಟೆಡ್ ಕಾರ್ಖಾನೆಯನ್ನು ನಂತರದ ದಿನಗಳಲ್ಲಿ ಕರ್ನಾಟಕ ಸರ್ಕಾರ ತನ್ನ ಅಧೀನಕ್ಕೆ ಸೇರ್ಪಡೆ ಮಾಡಿಕೊಂಡು ಮೈಸೂರು ಐರನ್ ಸ್ಟೀಲ್ ಲಿಮಿಟೆಡ್(ಎಂಐಎಸ್‌ಎಲ್) ಎಂಬ ಹೆಸರನ್ನು ನಾಮಕರಣ ಗೊಳಿಸಿತು. ನಂತರ 1989ರಲ್ಲಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆ ಯಾಗಿ ಸೇರ್ಪಡೆಗೊಳಿಸಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂಬ ಹೆಸರನ್ನು ನಾಮಕ ರಣಗೊಳಿಸಲಾಯಿತು.1998 ರಲ್ಲಿ ಪ್ರಾಧಿಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ವಹಿಸಿಕೊಂಡು ಘಟಕವನ್ನಾಗಿಸಿ ಕೊಂಡಿದೆ. 2016 ರಲ್ಲಿ ಎನ್‌ಐಟಿಐ ಆಯೋಗ ಕಾರ್ಖಾನೆಯನ್ನು ಬಂಡ ವಾಳ ಹಿಂಪಡೆಯುವ ಪ್ರಕ್ರಿಯೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಸರ್ಕಾರ ಬಂಡವಾಳ ಹಿಂಪಡೆಯವ ಪ್ರಕ್ರಿಯೆ ಆರಂಭಿಸಿತು. ಆದರೆ ಕಾರ್ಖಾನೆಯನ್ನು ಕೊಂಡುಕೊಳ್ಳಲು ಯಾರು ಸಹ ಮುಂದೆ ಬರಲಿಲ್ಲ. ಸರ್ಕಾರ ಕೈಗೊಂಡ ಕ್ರಮ ವಿಫಲವಾ ಗಿದೆ ಎಂದು ಸಂಸದರಿಗೆ ಮನವಿ ಯಲ್ಲಿ ತಿಳಿಸಲಾಗಿದೆ.
ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿ ಸಹಕಾರದೊಂದಿಗೆ ನಂತರದ ದಿನಗಳಲ್ಲಿ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 280ಕಾಯಂ ಹಾಗು 1340 ಗುತ್ತಿಗೆ ಕಾರ್ಮಿಕರು ಹೆಚ್ಚಿನ ಶ್ರಮ ವಹಿಸಿ ಕಡಿಮೆ ಬಂಡವಾಳದಲ್ಲಿ, ಕಡಿಮೆ ಉತ್ಪಾದನೆಯಲ್ಲಿ ಲಾಭಾಂಶ ಕಂಡುಕೊಳ್ಳುತ್ತಿದ್ದು, ವಹಿವಾಟು ಸುಮಾರು 400 ಕೋ. ರು.ಗಳಿಗೆ ಹೆಚ್ಚಿಸಲಾಗಿದೆ. ಇದೀಗ ಕಾರ್ಖಾನೆ ಯಲ್ಲಿ ಉತ್ಪಾದನೆಯಾಗುವ ರೈಲ್ವೆ ಆಕ್ಸ್‌ಲೆಸ್‌ಗಳಿಗೆ ಪ್ರಾಧಿಕಾರದ ಕೇಂದ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಉತ್ಪಾದನೆ ಹೆಚ್ಚಿಸಲು ಪ್ರಸ್ತುತ ಕನಿಷ್ಠ 300 ಕೋ. ರು. ಅಗತ್ಯವಿದೆ. ಉಕ್ಕು ಪ್ರಾಧಿಕಾರ 2020-21 ನೇ ಮೊದಲ ತ್ರೈವಾರ್ಷಿಕ ಹಣಕಾಸು ವರ್ಷದಲ್ಲಿ 9,597 ಕೋ.ರು.ಗಳಿಗೂ ಹೆಚ್ಚಿನ ಲಾಭಾಂಶ ಸಾಧಿಸಿದೆ. ಈ ನಡುವೆ ತನ್ನ ಅಧೀನದಲ್ಲಿರುವ ಪ್ರಮುಖ ಕಾರ್ಖಾನೆಗಳಿಗೆ ಒಟ್ಟು 1.5 ಲಕ್ಷ ಕೋ. ರು. ಬಂಡವಾಳ ತೊಡಗಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಪ್ರಾಧಿಕಾರದ ಅಧೀನದಲ್ಲಿಯೇ ಮುಂದುವರೆಸಿ ಅಗತ್ಯವಿರುವ ಬಂಡವಾಳ ಪಡೆಯಲು ಹೆಚ್ಚಿನ ಸಹಕಾರ ನೀಡುವಂತೆ ಮನವರಿಕೆ ಮಾಡಲಾಗಿದೆ.
ಅಲ್ಲದೆ ಕಾರ್ಖಾನೆಗೆ ಸೇರಿದ ಸಾಕಷ್ಟು ಖಾಲಿ ಜಾಗವಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸದ್ಬಳಕೆ ಮಾಡಿ ಕೊಂಡು ಅಭಿವೃದ್ಧಿ ಯೋಜನೆ ಗಳನ್ನು ರೂಪಿಸಿಕೊಳ್ಳು ವಂತೆ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
ಮನವಿಗೆ ಸ್ಪಂದಿಸಿರುವ ಸಂಸದರು, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಪ್ರಾಧಿಕಾರಕ್ಕೆ ಒತ್ತಾಯಿಸುವುದಾಗಿ ಹಾಗು ಖಾಲಿ ಜಾಗ ಸದ್ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಉಪಾಧ್ಯಕ್ಷ ಕುಮಾರ್ ಎಎಲ್ ಡಬ್ಲ್ಯೂ, ಪ್ರಧಾನ ಕಾರ್ಯದರ್ಶಿ ಯು.ಎ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು ಮತ್ತು ಎಸ್ ಮೋಹನ್ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795