ಸ್ವಯಂ ಪ್ರೇರಣೆಯಿಂದ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ : ಚನ್ನಪ್ಪ

 


ವಿಜಯ ಸಂಘರ್ಷ /ಭದ್ರಾವತಿ

ಪ್ರತಿಯೊಂದು ಕೆಲಸ ಸರ್ಕಾರದಿಂದಲೇ ನಡೆಯಬೇಕೆಂಬ ಮನೋಭಾವದಿಂದ ಹೊರಬಂದು ನಮ್ಮಿಂದಲೂ ಏನಾದರೂ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಪರಿಸರ ರಕ್ಷಣೆ ಮಾಡಲು ಸಾಧ್ಯ ಎಂದು ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಹೇಳಿದರು.

ಅವರು ಭಾನುವಾರ ಸಿದ್ದಾಪುರ ಎನ್‌ಟಿಬಿ ಲೇಔಟ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ನಮ್ಮ ಸುತ್ತಮುತ್ತಲಿನ ಪರಿಸರ ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಇದರಿಂದ ಹಲವಾರು ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ನಾವೆಲ್ಲರೂ ಎಚ್ಚೆತ್ತುಕೊಳ್ಳತ್ತಿದ್ದರೇ ಅಪಾಯ ಖಚಿತ.  ಎಲ್ಲವನ್ನು ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಇದನ್ನು ಅರಿತುಕೊಂಡು ಸ್ವಯಂಪ್ರೇರಣೆಯಿಂದ ಪರಿಸರ ರಕ್ಷಣೆಗೆ ಮುಂದಾಗಬೇಕು. ಒಬ್ಬೊಬ್ಬರು ಒಂದೊಂದು ಸಸಿ ನೆಡುವ, ಒಗ್ಗಟ್ಟಾಗಿ ಉದ್ಯಾನವನ ಅಭಿವೃದ್ಧಿಪಡಿಸುವ, ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ ರಕ್ಷಣೆಯಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದರು.

ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಗರ ಬೆಳವಣಿಗೆ ಪರಿಣಾಮ ಗಿಡಮರಗಳು ನಾಶವಾಗುತ್ತಿವೆ. ಉತ್ತಮ ಪರಿಸರವಿಲ್ಲದ ವಾತಾವರಣದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅತಿ ಅವಶ್ಯಕವಿರುವ ವ್ಯಾಪ್ತಿಗಳಲ್ಲಿ ನಗರಸಭೆ ವತಿಯಿಂದ ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಇಂತಹ ಕಾರ್ಯಗಳಿಗೆ ಸ್ಥಳೀಯರು ಸಹ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಅಧ್ಯಕ್ಷತೆವಹಿಸಿದ್ದರು. ಪರಿಸರ ಅಭಿಯಂತರ ಪ್ರಭಾಕರ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ನಾಗರತ್ನ, ಲತಾ ಚಂದ್ರಶೇಖರ್, ಅನುಸುಧಾ ಮೋಹನ್, ಸವಿತಾ ಉಮೇಶ್, ಶೃತಿ ವಸಂತ ಕುಮಾರ್ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ಒಕ್ಕೂಟಗಳ ಪ್ರಮುಖರು, ಸ್ಥಳೀಯರು ಪಾಲ್ಗೊಂಡಿದ್ದರು.

ಯಾವುದೇ ನೆರವಿಲ್ಲದೆ ಸ್ವಯಂ ಪ್ರೇರಣೆಯಿಂದ  ನಗರಸಭೆ ಉದ್ಯಾನವನ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ರಾಧಾಬಾಯಿ ಹಾಗು ಬಾಲಾಜಿ ಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು