ಒಡೆಯರ್ ರವರ ಜನಪರ ಕಾಳಜಿ ಇಂದು ಆಡಳಿತ ನಡೆಸುವವರಿಗೆ ಮಾರ್ಗದ ರ್ಶನವಾಗಿದೆ: ವೆಂಕಟೇಶ್

 


ವಿಜಯ ಸಂಘರ್ಷ/ಭದ್ರಾವತಿ

ರಾಜರ್ಷಿ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆ ಅಪಾರವಾಗಿದ್ದು, ಅವರು ಹೊಂದಿದ್ದ ಜನಪರ ಕಾಳಜಿ ಇಂದು ಆಡಳಿತ ನಡೆಸುವವರಿಗೆ ಮಾರ್ಗದರ್ಶನ ವಾಗಿದೆ. ಇವರ ಜನ್ಮದಿನಾಚರಣೆ ನಾಡಿನಾದ್ಯಂತ ಶಾಲಾ-ಕಾಲೇಜು ಗಳಲ್ಲಿ ಆಚರಿಸುವಂತಾಗಬೇಕು ಎಂದು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು.

ಅವರು ಶನಿವಾರ ಮಿನಿವಿಧಾನ ಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕವಯಸ್ಸಿನಲ್ಲಿಯೇ ರಾಜನಾಗುವ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾ ಗಿದ್ದರು.  ಅವರ ದೂರದೃಷ್ಟಿಯ ಫಲವಾಗಿ ನಗರದಲ್ಲಿ  ವಿಐಎಸ್ಎಲ್ ಮತ್ತು ಎಂಪಿಎಂ  ಕಾರ್ಖಾನೆಗಳ ಆರಂಭಕ್ಕೆ ಕಾರಣರಾಗುವ ಮೂಲಕ ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದರು. ಅಲ್ಲದೆ ನಾಡಿನಾದ್ಯಂತ ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು.  ಅವರ ಜನ್ಮದಿನಾಚರಣೆ ಮುಂಬರುವ ದಿನ ಶಾಲಾ-ಕಾಲೇಜುಗಳಲ್ಲಿ ನಡೆಯುವ ಮೂಲಕ ಅವರ ಚಿಂತನೆಗಳು ಎಲ್ಲರಿಗೂ ತಲುಪುವಂತಾಗಬೇಕು ಎಂದರು.

ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್,  ಬಾಲಕೃಷ್ಣ, ಕೆ ಮಂಜುನಾಥ್, ವಿಶ್ವೇಶ್ವರ ಗಾಯಕ್ವಾಡ್ ಸೇರಿದಂತೆ ಇನ್ನಿತರರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಲವಾರು ಸಾಮಾಜಿಕ ಬದ್ಧತೆಗಳ ಮೂಲಕ ಮಾದರಿಯಾಗಿದ್ದಾರೆ. ಸರ್ವರನ್ನು ಸಮಾನತೆಯಿಂದ ಕಾಣುವ ಮೂಲಕ ನಾಡಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪ್ರಸ್ತುತ ಅವರು ನಗರದಲ್ಲಿ ಆರಂಭಿಸಿದ ಎರಡು ಕಾರ್ಖಾನೆಗಳು ಅವನತಿಯ ದಾರಿ ಹಿಡಿದಿದ್ದು, ಇಂತಹ ಸಂದರ್ಭದಲ್ಲಿ ಅವರಿಗೆ ಗೌರವಿಸುವಂತಹ ಕಾರ್ಯಗಳು ನಡೆಯಬೇಕಾಗಿದೆ. ನಗರದಲ್ಲಿ ಅವರ ಪುತ್ಥಳಿ ಅನಾವರಣಗೊಳ್ಳಬೇಕಾಗಿದೆ. ಅಲ್ಲದೆ ಅವರ ಹೆಸರನ್ನು ಅಜರಾಮರವಾಗಿಸುವ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.

 ಶಿರಸ್ತೇದಾರ್ ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು, ಟಿ.ವಿ ಗೋವಿಂದಸ್ವಾಮಿ, ಚನ್ನಪ್ಪ, ಎಸ್.ಎನ್  ಶಿವಪ್ಪ, ಸಾವಂತ್, ಗಿರಿ ನಾಯ್ಡು, ಎನ್. ಮಂಜುನಾಥ್, ಉಪ ತಹಶೀಲ್ದಾರ್ ಗಳಾದ ಮಂಜನಾಯ್ಕ, ಅರಸು, ನಾರಾಯಣಗೌಡ, ಆಹಾರ ನಿರೀಕ್ಷಕ ಎ.ಟಿ ಬಸವರಾಜು ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು