ವಿಜಯ ಸಂಘರ್ಷ
ತೀರ್ಥಹಳ್ಳಿ: ವಿಧಾನಸಭಾ ಚುನಾವಣೆ ಶ್ರೀಮಂತ ರಾಜಕಾರಣಿ ಹಾಗೂ ರೈತ ನಾಯಕರ ನಡುವೆ ನಡೆಯಲಿದೆ. ಹೊಸ ಮುಖಕ್ಕೆ ಅವಕಾಶ ಸಿಕ್ಕಿದೆ, ಜೆಡಿಎಸ್ ಗೆಲ್ಲಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಹೇಳಿದರು.
ಶನಿವಾರ ಪಟ್ಟಣದ ಕೊಪ್ಪ ಸರ್ಕಲ್ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಏ.17 ರ ಸೋಮವಾರ 12: 30 ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಕೆಟಿಕೆಯಿಂದ ರ್‍ಯಾಲಿ ನಡೆಯಲಿದೆ. ಆ ನಂತರದಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಆರಂಭ ಮಾಡಲಿದ್ದೇನೆ. ಈ ಬಾರಿ ಎಲ್ಲಾ ಕಡೆ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಹೇಳುತ್ತಿದ್ದಾರೆ ಹಾಗಾಗಿ ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದರು.
3,000 ಕೋಟಿ ಕಾಮಗಾರಿ ತಂದಿದ್ದೇನೆ ಎಂದು ಗೃಹಸಚಿವರು ಹೇಳುತ್ತಾರೆ. ಆದರೆ ಮಾಡಿರುವುದು ರಸ್ತೆ ಮಾತ್ರ, ರಸ್ತೆಯೊಂದೆ ಅಭಿವೃದ್ಧಿ ಅಲ್ಲ. ಪಟ್ಟಣದ ಕುಶಾವತಿ ಪಾರ್ಕ್ ಹಾಳಾಗಿದೆ. ಅದನ್ನು ಇಲ್ಲಿಯ ವರೆಗೆ ಕಣ್ಣೆತ್ತಿ ಕೂಡ ನೋಡಿಲ್ಲ. ಗೆಲ್ಲುವವರೆಗೆ ಮಾತ್ರ ಏನು ಇಲ್ಲ ಗೆದ್ದ ಮೇಲೆ ಎಲ್ಲರೂ ಕಂಟ್ರಾಕ್ಟರ್ ಆಗುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಹಣದ ಹೊಳೆ ಹರಿಸಲು ಹೊರಟಿದ್ದಾರೆ. ಆದರೆ ಜನರಿಗೆ ಅನುಕೂಲ ಆಗುವ ರೀತಿ ಯಾರು ಮಾಡಿಲ್ಲ ಎಂದರು.
ತೀರ್ಥಹಳ್ಳಿ ಯುವಕರು ವೃತ್ತಿ ಬದುಕಿಗೆ ಬೆಂಗಳೂರಿಗೆ ಹೋಗುತ್ತಿದ್ದಾರೆ. ಅವರೆಲ್ಲ ರಿಗೂ ಇಲ್ಲೇ ಉದ್ಯೋಗ ಸಿಗುವ ಹಾಗೆ ಮಾಡಬೇಕು. ಈ ಕ್ಷೇತ್ರದಲ್ಲೇ ಉದ್ಯೋಗ ಸೃಷ್ಟಿ ಆಗಬೇಕು. ತಾಲೂಕು ಪಂಚಾಯತ್ ಕಟ್ಟಡದಿಂದ ಏನು ಅನುಕೂಲ ಇಲ್ಲ. ಕಟ್ಟಡ ನೋಡಲು ಬದಲಾಗಿದೆಯೇ ಹೊರತು ಬೇರೆ ಏನು ಬದಲಾಗಿಲ್ಲ. ಈ ಕಟ್ಟಡದಿಂದ ಜನರಿಗೆ ಉದ್ಯೋಗ ಸೃಷ್ಟಿ ಮಾಡಲು ಇವರಿಗೆ ಆಗಲಿಲ್ಲ. ದುಡಿಯುವ ಕೈಗಳಿಗೆ ಫಾಕ್ಟರಿ ಮಾಡಿಲ್ಲ. ಜನರಿಗೆ ಅನುಕೂಲ ಆಗುವ ಬದಲು ಕಂಟ್ರಾಕ್ಟರ್ ಗೆ ಹಣ ಮಾಡಿಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಣಜೆ ಕಿರಣ್, ತಲಬಿ ರಾಘವೇಂದ್ರ, ಮಹೇಂದ್ರ ಗೌಡ, ನಟರಾಜ್ ಹೆಗಡೆ, ದೇವಪ್ಪ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.