ವಿಜಯ ಸಂಘರ್ಷ
ಭದ್ರಾವತಿ: ಈ ದೇಶದ ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ ಬದುಕಲು ಅವಕಾಶ ನೀಡಿದ್ದು. ಪ್ರಜೆಗಳೆಲ್ಲರೂ ನೆಮ್ಮದಿಯಿಂದ ಬದುಕಲು ಕಾರಣವಾದ ಸಂಗತಿಯೆ ಪ್ರಜಾಪ್ರಭುತ್ವ. ನಮ್ಮ ಎಲ್ಲರ ಒಳಗೂ ಒಳಿತಿನ ಸಂಗತಿಗಳಿವೆ. ಈ ಒಳಿತಿನ ಸಂಗತಿಗಳು ಸಂವಿಧಾನ ದಲ್ಲಿಯು ಇವೆ. ಜಾತಿ ಧರ್ಮಗಳನ್ನು ಮೀರಿ ನಾವೆಲ್ಲ ಭಾರತೀಯರು ಎಂಬ ಮನೋಭಾವ ಮೂಡುವಲ್ಲಿ ಸಂವಿಧಾನದ ಪಾತ್ರ ಹಿರಿದದ್ದು. ಹೀಗಾಗಿ ನಮ್ಮೆಲ್ಲರ ಹೃದಯ ಧರ್ಮ ಭಾರತ ಸಂವಿಧಾನ ಎಂದು ನ್ಯಾಯವಾದಿಗಳಾದ ಸುಧೀರ್ ಕುಮಾರ್ ಮರೊಳ್ಳಿ ಹೇಳಿದರು.
ಅವರು ಕುವೆಂಪು ವಿಶ್ವವಿದ್ಯಾಲಯದ
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ಪ್ರೊ.ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ "ಸಂವಿಧಾನ ಸಮರ್ಪಣ ದಿನ" ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಭಾರತ ಸ್ವಾತಂತ್ರ್ಯವನ್ನು ಪಡೆದ ನಂತರ ಸ್ವಾತಂತ್ರ್ಯದ ಆಶಯವನ್ನು ಈಡೇರಿಸುವ ಜವಾಬ್ದಾರಿ ಎಲ್ಲರ ಮೇಲಿತ್ತು. ಆ ಹೊತ್ತಿನಲ್ಲಿ ಸಂವಿಧಾನವನ್ನು ರಚಿಸುವ ಮೂಲಕ ಅಂಬೇಡ್ಕರ್ ಅವರು ನಿಜವಾದ ಸ್ವಾತಂತ್ರ್ಯ ಎಂದರೆ ಏನೆಂದು ಜನರಿಗೆ ಅರ್ಥೈಸಿದರು.
ಇಂದು ಅಧಿಕಾರ, ಆಹಾರದ ಹಕ್ಕು, ನಮ್ಮಿಷ್ಟದಂತೆ ಬದುಕುವ ಹಕ್ಕು ಎಲ್ಲವನ್ನು ಸಂವಿಧಾನ ನೀಡಿದೆ ಹೀಗಾಗಿ ಸಂವಿಧಾನವನ್ನು ಗೌರವಿಸುವ ಎಲ್ಲರಿಂದ ಆಗಬೇಕು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಬಂಗಾರಪ್ಪ ಜಿ. ಅವರು ಅನೇಕ ಸವಾಲುಗಳ ನಡುವೆಯು ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದಾದರೆ ಅದಕ್ಕೆ ಸಂವಿಧಾನವೆ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ.ಗೋಪಿನಾಥ್ ಎಸ್.ಎಂ. ಸಂವಿಧಾನದ ಆಶಯವೆ ಸಮಾನತೆ, ಯಾರೂ ಕೂಡ ಯಾವುದೇ ಕಾರಣದಿಂದ ತಮಗೆ ಸಿಗಬೇಕಾದ ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾಗಬಾರದು. ಸಂವಿಧಾನ ನೀಡಿರುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಸ್ತಾವಿಕ ನುಡಿಗಳನ್ನಾಡಿ, ಸಂವಿಧಾನದ ಪ್ರಸ್ತಾವನೆಯನ್ನು ಭೋದಿಸಿದರು.
ಆಶುಕವಿ ಯುಗಧರ್ಮ ರಾಮಣ್ಣ ಪ್ರಾರ್ಥಿಸಿ, ಡಾ.ಪುರುಷೋತ್ತಮ್ ಎಸ್.ವಿ. ಸ್ವಾಗತಿಸಿದರೆ,ಡಾ.ರವಿ ನಾಯಕ್ ವಂದಿಸಿ ಡಾ.ನವೀನ್ ಮಂಡಗದ್ದೆ ನಿರೂಪಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಮೈಸೂರಿನ ಗಾನ ಸಿಂಚನ ಕಲಾವಿದರು ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ಗೀತೆಗಳನ್ನು ಹಾಡಿದರು.