ಹನಿಟ್ರ್ಯಾಪ್ ಪ್ರಕರಣ : ಮೈಸೂರು ಮೂಲದ ಐವರ ಸೆರೆ

ವಿಜಯ ಸಂಘರ್ಷ
ಭದ್ರಾವತಿ: ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಹನಿಟ್ರ್ಯಾಪ್ ಪ್ರಕರಣ ವೊಂದನ್ನು ಬೇಧಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. ಮೈಸೂರು ಮೂಲದ ಶ್ವೇತಾ, ವಿನಾಯಕ, ಮಹೇಶ್, ಅರುಣ್‌ಕುಮಾರ್ ಹಾಗೂ ಹೇಮಂತ್ ಬಂಧಿಸಲಾಗಿದ್ದು, 1 ಕಾರು ಮತ್ತು 7 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಶರತ್ ಎಂಬುವರ ದೂರು ಆಧರಿಸಿ, ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಐವರನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ.

    ಘಟನೆ ವಿವರ :
ನಗರದ ಪೆಟ್ರೋಲ್  ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶರತ್‌ಕುಮಾರ್‌ಗೆ ಮೈಸೂರಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಶ್ವೇತಾ ಪರಿಚಯ ಮಾಡಿಕೊಂಡಿದ್ದಳು. ನಂತರ ವಾಟ್ಸಪ್‌ನಲ್ಲಿ ಬೆತ್ತಲೆಯಾಗಿ ಮಹಿಳೆಯೋರ್ವಳು ವಿಡಿಯೋ ಕಾಲ್ ಮಾಡಿದ್ದಳು. 20 ಲಕ್ಷ ರು. ಹಣ ನೀಡುವಂತೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

ಈ ಐವರ ತಂಡ ಶರತ್‌ಕುಮಾರ್ ಬಳಿ 1 ಲಕ್ಷ ರು. ಕಿತ್ತುಕೊಂಡಿದ್ದು, ಅಲ್ಲದೆ ಹಲ್ಲೆ ನಡೆಸಿ ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ 25 ಲಕ್ಷ ರು. ಸಾಲ ಪಡೆದುಕೊಂಡಿರುವುದಾಗಿ ಸಹಿ ಹಾಕಿಸಿಕೊಂಡು ಎರಡು ದಿನಗಳ ಕಾಲ ಕೂಡಿ ಹಾಕಿದ್ದರು ಎನ್ನಲಾಗಿದೆ.

ಮೈಸೂರಿನಿಂದ ತಪ್ಪಿಸಿಕೊಂಡು ಬಂದ ಶರತ್‌ಕುಮಾರ್ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು, ದೂರನ್ನು ಆಧರಿಸಿ, ಹಣ ವರ್ಗಾವಣೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಐವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು