ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ-ಪರಿಹಾರ ನೀಡಲು ಬದ್ಧ

ವಿಜಯ ಸಂಘರ್ಷ

ಶಾಸಕ, ಡಿಎಫ್‌ಓ, ಎಸಿಎಫ್, ಆರ್‌ಎಫ್‌ಓ. ತಂಡ ವೀಕ್ಷಣೆ

ಸಾಗರ: ಕಳೆದ ಹಲವಾರು ದಿನಗಳಿಂದ ಆನಂದಪುರ ಸುತ್ತಮುತ್ತಲಿನ ಗ್ರಾಮಗಳ ತೋಟಗಳಿಗೆ ನುಗ್ಗಿ ಕಾಡಾನೆಗಳು ದಾಂಧಲೆ ಮಾಡಿ ಬೆಳೆಗಳಿಗೆ ಹಾನಿ ಮಾಡಿರುವ  ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಗೊಳಗಾದ ರೈತರಿಗೆ ಸಾಂತ್ವನ ಹೇಳಿದ್ದಾರೆ.


ಪತ್ರೆಹೊಂಡ, ಕೆರೆಹಿತ್ಲು, ಲಕ್ಕವಳ್ಳಿ, ಸಂಗಣ್ಣನಕೆರೆ, ಭೈರಾಪುರ ಮುಂತಾದ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ತೋಟಗಳಲ್ಲಾದ ಬೆಳೆನಷ್ಟವನ್ನು ಗಮನಿಸಿ, ರೈತರ ಅಳಲನ್ನು ಆಲಿಸಿದರು.


ಮಳೆ ಇಲ್ಲದ ಬರಗಾಲದ ಸಂದರ್ಭದಲ್ಲಿಯೂ ಸಹ ಒಂದಷ್ಟು ಬೆಳೆಗಳನ್ನು ರೈತರು ಕಷ್ಟಪಟ್ಟು ಬೆಳೆದು ಕೊಂಡಿದ್ದಾರೆ ಇದರ ನಡುವೆ ಆನೆಗಳಿಂದಾಗಿ ಬೆಳೆ ನಷ್ಟವುಂಟಾಗಿರುವುದು ಬೇಸರ ವನ್ನುಂಟುಮಾಡಿದೆ. ಸರ್ಕಾರದಿಂದ  ಪರಿಹಾರ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಯಾರು ಯಾರು ಬೆಳೆ ನಷ್ಟಕ್ಕೆ ಅರ್ಜಿ ಸಲ್ಲಿಸಿರುವುದಿಲ್ಲವೋ ಅವರು ಅರ್ಜಿಸಲ್ಲಿಸ ಬೇಕಾಗಿ ನೊಂದ ರೈತರಲ್ಲಿ ಮನವಿ ಮಾಡಿದರು.


ರೈತರು ಬೆಳಗಿನ ಇಬ್ಬನಿ ಸಂದರ್ಭದಲ್ಲಿ, ರಾತ್ರಿ ಸಮಯದಲ್ಲಿ ಕಾಡಿನೆಡೆಗೆ ಹೋಗಬೇಡಿ. ತಮ್ಮ ಹೊಲ-ಗದ್ದೆ-ತೋಟಗಳೆಡೆ ಹೋಗುವಾಗ ಬಹಳ ಎಚ್ಚರಿಕೆ ವಹಿಸಿ ಕೊಳ್ಳಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ ಅವರು ಸಂಬoಧಿಸಿದ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿ ಆನೆಗಳನ್ನು ಓಡಿಸುವಂತೆ ಹೇಳಲಾಗಿದೆ. ಸಿಬ್ಬಂದಿಗಳಿಗೆ ಸಹಕಾರಿ ಯಾಗುವಂತೆ ಇನ್ನೂ ಹೆಚ್ಚಿನ ಮಾವುತರನ್ನು ಸಹ  ಕರೆತರಲು ತಿಳಿಸಲಾಗಿದೆ ಎಂದರು.


ಆನೆ ದಾಳಿಯಿಂದಾಗಿ ಸುಮಾರು ಆರೂವರೆ ಲಕ್ಷಕ್ಕೂ ಹೆಚ್ಚಿನ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಿರುವುದಾಗಿ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.


ಡಿ.ಎಫ್.ಓ ಸಂತೋಷ್‌ಕುಮಾರ್ ಕೆಂಚಪ್ಪನವರ್, ಎ ಸಿ ಎಫ್ ಶ್ರೀಧರ್, ಚೋರಡಿ ಆರ್ ಎಫ್ ಓ ರವಿಕುಮಾರ್, ಮುಬಾರಕ್, ಮಾವುತರು,ಕಾವಾಡಿಗರು ಸ್ಥಳ ವೀಕ್ಷಣೆ ಸಮಯದಲ್ಲಿ ಶಾಸಕರಿಗೆ ಸಾಥ್ ನೀಡಿದರು.


ಈ ಸಂದರ್ಭದಲ್ಲಿ ಅನಿತಾಕುಮಾರಿ, ಸೋಮಶೇಖರ್ ಲ್ಯಾವಿಗೆರೆ, ರಮಾನಂದ ಸಾಗರ್,  ಉಮೇಶ್ ಎನ್ ಸಿದ್ದೇಶ್ವರ ಕಾಲೋನಿ, ಚೇತನ್ ರಾಜ್ ಕಣ್ಣೂರು, ರಹಮತುಲ್ಲಾ,ಎಂ ಎಲ್ ಈಶ್ವರ,ಮೋಹನ್, ಬಸವರಾಜ್ ಮುಂತಾದವರಿದ್ದರು.


(ವರದಿ ಎಸ್ ಡಿ ಚಂದ್ರಶೇಖರ್ ಆನಂದಪುರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು