ವಿಜಯ ಸಂಘರ್ಷ
ಭದ್ರಾವತಿ: ನಗರದ ಭದ್ರಾ ನದಿ ನೂತನ ಸೇತುವೆಯ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳ ನಿರ್ಲಕ್ಷವೆ ಕಾರಣ ಎಂದು ಕೆಆರ್ ಎಸ್ ಮುಖಂಡರು ಆರೋಪಿಸಿದರು.
ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ಮುಖಂಡರು ಹಾಲಪ್ಪ ವೃತ್ತದ ಮೂಲಕ ಮೆರವಣಿಗೆ ನಡೆಸಿ ಮಾಧವಚಾರ್
ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಭದ್ರಾವತಿ ನಗರದ ನೂತನ ಸೇತುವೆಯ ಕಾಮಗಾರಿ ಸುಮಾರು ಐದಾರು ವರ್ಷ ಗಳಿಂದ ನಡೆಯುತ್ತಿದ್ದು ಇಂದಿಗೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ನೀಡಿಲ್ಲ. ಸಾರ್ವಜನಿಕರ ಹಣದಲ್ಲಿ ನಿರ್ಮಾಣ ವಾಗುತ್ತಿರುವ ಸೇತುವೆಯ ವಿಳಂಬಕ್ಕೆ ಅಧಿಕಾರಿಗಳ ನಿರ್ಲಕ್ಷವೆ ಕಾರಣ ಎಂದು ದೂರಿದರು.
ಹಳೇಸೇತುವೆಯು ಸುಮಾರು ನೂರು ವರ್ಷಗಳ ಮೇಲ್ಪಟ್ಟಿದ್ದು ಇದು ಯಾವ ಸಮಯದಲ್ಲಿ ಬೇಕಾದರೂ ಕುಸಿಯಬಹುದು ಹಳೆ ಸೇತುವೆ ಮೇಲೆ ದಿನನಿತ್ಯ ಸಾವಿರಾರು ವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿದ್ದು ಸಾರ್ವಜನಿಕರು ಜೀವಭಯದಿಂದ ಸಂಚರಿಸುತ್ತಿದ್ದಾರೆ. ಅಧಿಕಾರಿಗಳು ನಿರ್ಲಕ್ಷ ತೋರದೆ ಕಾಮಗಾರಿಯನ್ನು ಪೂರ್ಣಗೊಳಿಸಿ ಅತೀ ಶೀಘ್ರದಲ್ಲಿ ಸಾರ್ವಜನಿಕರು ಸುರಕ್ಷತವಾಗಿ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸುವಂತೆ ಅಗ್ರಹಿಸಿ, ಕಾಮಗಾರಿಯು ವಿಳಂಬವಾದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಮಂಜುನಾಥ್, ನಾಗರಾಜ್ ರಾವ್ ಶಿಂಧೆ, ದಯಾನಂದ್, ತೀರ್ಥ, ತ್ಯಾಗರಾಜ್ ಸೇರಿದಂತೆ ಅನೇಕರಿದ್ದರು.