ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಸರ್ಕಾರಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು

ವಿಜಯ ಸಂಘರ್ಷ
ಭದ್ರಾವತಿ: ರಾಜರ ಆಳ್ವಿಕೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದ ಮಾದರಿಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘವು ತನ್ನ ದಶಮಾನೋತ್ಸ ವದ ಪ್ರಯುಕ್ತ ಜನ್ನಾಪುರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಜನಪದ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಪುರಾತನ ಕಲೆಯಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ರಾಜರ ಕಾಲದಲ್ಲಿ ಇನಾಂ ನೀಡುತ್ತಿದ್ದಂತೆಯೇ ಇಂದು ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುವುದು ಅಗತ್ಯ ಎಂದರು.

ಮಕ್ಕಳನ್ನು ದುಶ್ಚಟಗಳಿಂದ ದೂರ ಮಾಡಲು ಕಲೆಗಳನ್ನು ಕಲಿಸುವುದು ಮುಖ್ಯ. ವಿದ್ಯಾಭ್ಯಾಸದ ಜೊತೆಗೆ ಕಲೆಗಳು ಸಹ ಮುಖ್ಯ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳಿಗೂ ಅರಿವು ಮೂಡಿಸ ಬೇಕೆಂದು ಕರೆ ನೀಡಿದರು.

ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಜಾನಪದರು ವಿದ್ಯಾವಂತರಲ್ಲ, ಆದರೆ ಬದುಕಿನ ಮಹತ್ವ ಅರಿತವರು. ಆರೋಗ್ಯದ ಮಹತ್ವ ತಿಳಿದವರು. 64 ವಿದ್ಯೆಗಳಿಗೂ ತಾಯಿ ಬೇರು ಭಾರತ. ಜ್ಞಾನಪೀಠ ಪಡೆದ ಎಲ್ಲ ಸಾಹಿತಿಗಳು ಹಳ್ಳಿಯ ಮಹತ್ವ ಅರಿತಿದ್ದರು. ಆದ್ದರಿಂದ ಅವರಿಗೆ ಬದುಕು - ಬವಣೆಗಳ ಮಹತ್ವ ತಿಳಿದಿತ್ತು ಎಂದರು.

ವೇದಿಕೆಯಲ್ಲಿ ಸಮಾಜಸೇವಕ ವೆಂಕಟರಮಣ ಶೇಟ್, ಬೆಂಗಳೂರು ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪಿಎಸ್ಐ ಯೋಗೀಶ್ ಕುಮಾರ್. ಸಿ, ರಂಗಕರ್ಮಿ ಸಾಸ್ವೇಹಳ್ಳಿ ಸತೀಶ್, ಚಲನಚಿತ್ರ ನಿರ್ದೇಶಕ ಹರ್ಷಪ್ರಿಯ, ನಗರಸಭೆ ಸದಸ್ಯ ಮಂಜುನಾಥ್, ಮುಖಂಡರಾದ ಬಿ.ಎಸ್.ಗಣೇಶ್, ಉಮೇಶ್, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ಕಾರ್ಯದರ್ಶಿ ಜಗದೀಶ್, ದಿವಾಕರ್ ಸೇರಿದಂತೆ ಮತ್ತಿತರರಿದ್ದರು.

ಕು.ಸಿಂಧು ಪ್ರಾರ್ಥಿಸಿದರು. ಜಗದೀಶ್ ಸ್ವಾಗತಿಸಿದರು. ಸೌಮ್ಯ ನಿರೂಪಿಸಿ, ವಂದಿಸಿದರು.

ಜಾನಪದ ಜಾತ್ರೆಯಲ್ಲಿ ಗುಡ್ಡಪ್ಪ ಜೋಗಿ ತಂಡದಿಂದ ಜೋಗಿಪದ, ಭದ್ರಾವತಿ ಜನ್ನಾಪುರದ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ಕಲಾವಿದರಿಂದ ಜನಪದ ಹಾಡುಗಾರಿಕೆ, ಭದ್ರಾವತಿ ಅತ್ತಿಗುಂದ ಗ್ರಾಮದ ಚಂದ್ರಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ಶಿವಮೊಗ್ಗ ಬೆಳಲಕಟ್ಟೆ ಗ್ರಾಮದ ಸರಸ್ವತಿ ಕಲಾ ತಂಡದಿಂದ ಲಂಬಾಣಿ ನೃತ್ಯ,ಸಾಗರ ಬಂದಗದ್ದೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕೋಲಾಟ ಕಲಾ ತಂಡದಿಂದ ಕೋಲಾಟ, ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ ಶ್ರೀ ಗಜಾನನ ಡೊಳ್ಳು ಯುವಕರ ಸಂಘದಿಂದ ಡೊಳ್ಳುಕುಣಿತ, ಭದ್ರಾವತಿ ಡಿ.ಬಿ.ಹಳ್ಳಿಯ ಶ್ರೀ ಮುಗ್ಧ ಸಂಗಮೇಶ್ವರ ವೀರಗಾಸೆ ಕಲಾ ತಂಡದಿಂದ ಪುರುಷರ ವೀರಗಾಸೆ, ತರೀಕೆರೆ ಲಿಂಗದಹಳ್ಳಿಯ ಶ್ರೀ ಗುರುವೀರ ಮಹಿಳಾ ವೀರಗಾಸೆ ಕಲಾ ತಂಡದಿಂದ ಮಹಿಳಾ ವೀರಗಾಸೆ, ಉತ್ತರ ಕನ್ನಡ ಜಿಲ್ಲೆಯ ಅಂಚೊ ಮೂಳ ಸಿದ್ಧಿ ಸಾಂಸ್ಕೃತಿಕ ಕಲಾ ತಂಡದಿಂದ ಡಮಾಮಿ ನೃತ್ಯ, ಮಂಡ್ಯ ಜಿಲ್ಲೆ ಅರೇಚಾಕನಹಳ್ಳಿಯ ಶ್ರೀ ಸುಂದರೇಶ್ ಮತ್ತು ತಂಡದಿಂದ ಪೂಜಾ ಕುಣಿತ, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಕುಮಾರನಾಯ್ಕ ಮತ್ತು ತಂಡದವರಿಂದ ಕಂಸಾಳೆ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು