ಕಾಂತರಾಜ್ ವರದಿ ಜಾರಿಗೆ ಒತ್ತಾಯಿಸಿ ಭದ್ರಾವತಿಯಲ್ಲಿ ಡಿ:11 ರಂದು ಪ್ರತಿಭಟನೆ

ವಿಜಯ ಸಂಘರ್ಷ
ಭದ್ರಾವತಿ: ಅಹಿಂದ ನಾಯಕರೆಂದು ಬಿಂಬಿಸಿರುವ ಹಾಗೂ ಕಾಂತರಾಜ ವರದಿ ಯನ್ನು ಯತಾವತ್ತಾಗಿ ಜಾರಿಗೆ ತರುವುದಾಗಿ ಚುನಾವಣಾ ಪೂರ್ವದಲ್ಲಿ ಹೇಳಿದ್ದಂತೆ ಅಧಿಕಾರ ಗದ್ದುಗೆ ಏರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ವರದಿ ಜಾರಿಗೆ ತರಬೇಕೆಂದು ಹಿಂದುಳಿದ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್ ಸರಕಾರವನ್ನು ಒತ್ತಾಯಿಸಿದರು.

ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕಾಂತರಾಜ ವರದಿ ಅಸಲು ಕಡತ ಕಳೆದು ಹೋಗಿದೆ ಎಂದು ಊಹಾಪೋಹ ಹಬ್ಬಿಸಲಾಗುತ್ತಿದೆ. ಕಡತವು ಸರಕಾರದ ರಕ್ಷಣೆಯಲ್ಲಿ ಭದ್ರವಾಗಿದೆ ಅದು ನಾಪತ್ತೆ ಆಗಲು ಸಾಧ್ಯವಿಲ್ಲ. ಆಕಸ್ಮಾತ್ ಕಳೆದು ಹೋಗಿದ್ದರೆ ಹಿಂದಿನ ಆಯೋಗದ ಅಧ್ಯಕ್ಷರ ಮತ್ತು ಸಂಬಂದಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸಂವಿಧಾನ ಬದ್ಧವಾಗಿ 55 ಮಾನದಂಡ ಗಳನ್ನು ರೂಪಿಸಿ ಜಾತಿ ಸಮೀಕ್ಷೆ ಮಾಡಿರುವ ವರದಿಯನ್ನು ಭದ್ರವಾಗಿ ಸೀಲ್ ಮಾಡಿ ಸರಕಾರಕ್ಕೆ ನೀಡಲಾಗಿದೆ. ಅದನ್ನು ಕಳೆಯಲು ಸಾಧ್ಯವಿಲ್ಲವೆಂದು ಸ್ವತ' ಕಾಂತರಾಜ್ ಹೇಳಿದ್ದಾರೆ.

ವೇದಿಕೆಯ ಗೌರವಾಧ್ಯಕ್ಷ
ಪ್ರೊ:ಹೆಚ್.ರಾಚಪ್ಪ ಮಾತನಾಡಿ, 2014 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಾಂತರಾಜ ಆಯೋಗ ವರದಿ ರಚನೆ ಯಾಗಿ 2019 ರಲ್ಲಿ ನೀಡಿದ ವರದಿಯಲ್ಲಿ ರಾಜ್ಯದಲ್ಲಿನ ಕುಟುಂಬಗಳ ನಿಖರವಾದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ ಸಾಕಷ್ಟು ವೈಜ್ಞಾನಿಕ ಮಾಹಿತಿ ಕಲೆಹಾಕಿದೆ. ಆದರೂ ಬಲಾಡ್ಯ ಜಾತಿವಾದಿಗಳೊಂದಿಗೆ ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾರಿಗೆ ತರುವಲ್ಲಿ ವಿಫಲರಾದರು. ನಂತರದ ಸಿಎಂಗಳಾದ ಹೆಚ್ ಡಿ ಕೆ, ಬಿಎಸ್‌ವೈ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಯಾರೂ ಪರಿಗಣಿಸಿಲ್ಲ ಮತ್ತೀಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಬಲಾಡ್ಯರ ಒತ್ತಡಕ್ಕೆ ಮಣಿಯದೆ ಜನರಿಗೆ ನೀಡಿದ ಭರವಸೆಯಂತೆ ವರದಿ ಯನ್ನು ಜಾರಿಗೆ ತಂದು ದೇವರಾಜ ಆರಸರಂತೆ ಅಗ್ರಗಣ್ಯ ನಾಯಕರಾಗ ಬೇಕೆಂದು ಒತ್ತಾಯಿಸಿದರು.

ಮಾಜಿ ಉಪ ಮೇಯರ್ ಮಹಮ್ಮದ್ ಸನಾವುಲ್ಲಾ, ವೇದಿಕೆ ಸಂಚಾಲಕ
ಬಿ.ಜನಮೇಜಿರಾವ್ ಮಾತನಾಡಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಪ್ರೊ: ಡಿ.ಆರ್.ಉಮೇಶ್, ಪ್ರೊ.ಸಿ.ಬಿ. ಮನೋಹರ ಕುಮಾರ್, ಆರ್.ಟಿ.ನಟರಾಜ್, ಶಂಕರ ರಾವ್, ರಾಜು, ರಾಮಲಿಂಗಪ್ಪ ಕರಿಯಪ್ಪ ಮುಂತಾದವರಿದ್ದರು.

ಡಿ 11 ರಂದು ಪ್ರತಿಭಟನೆ:

ಕಾಂತರಾಜ್ ವರದಿ ಜಾರಿಗೊತ್ತಾಯಿಸಿ ಡಿ: 11 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ತಾಲೂಕು ಕಚೇರಿ ಆವರಣದಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು ಒಗ್ಗೂಡಿ ಧರಣಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು. ಬಲಿಷ್ಟ ಜಾತಿ ವಾದಿಗಳಿಗೂ ಎಚ್ಚರಿಸುವ ಕಾರ್ಯ ನಡೆಯಲಿದೆ. ದಲಿತ, ಅಲ್ಪ ಸಂಖ್ಯಾತರು, ಹಿಂದುಳಿದವರು ಹೋರಾಟದಲ್ಲಿ ಹೆಚ್ಚಾಗಿ ಭಾಗವಹಿಸ ಬೇಕೆಂದು ಮನವಿ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು