ವಿಜಯ ಸಂಘರ್ಷ
ಭದ್ರಾವತಿ :ತಾಲೂಕು ಮಾವಿನಕೆರೆ, ಶಿವಪುರ ಗ್ರಾಮ ಹಾಗೂ ಅಡ್ಲಘಟ್ಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇಲಾಖೆ ಇಟ್ಟಿದ್ದ ಬೋನ್ಗೆ ಚಿರತೆ ಶುಕ್ರವಾರ ಬಿದ್ದಿದ್ದು, ಇದೀಗ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಇಲಾಖೆಯು ಅಡ್ಲಘಟ್ಟ ಗ್ರಾಮದ ಹೊರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಸೆರೆಗೆ ಬೋನ್ ಇಟ್ಟಿದ್ದರು.
ಮಾವಿನಕೆರೆ ಕಾಲೋನಿ, ಶಿವಪುರ ಹಾಗೂ ಅಡ್ಲಘಟ್ಟ ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಾಗಿವೆ. ಇದರಿಂದ ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಿದೆ. ಕಳೆದ 6 ತಿಂಗಳುಗಳಿಂದ ಚಿರತೆಯು ಗ್ರಾಮದ ನಾಯಿಗಳನ್ನು ಬಲಿ ಪಡೆಯುತ್ತಿತ್ತು.
ನಾಯಿಗಳು ಖಾಲಿಯಾದ ನಂತರ ಕರುಗಳನ್ನು ತಿನ್ನಲು ಪ್ರಾರಂಭಿಸಿತ್ತು. ಅಲ್ಲದೆ, ಕೊಟ್ಟಿಗೆಯಲ್ಲಿದ್ದ ಜಾನುವಾರು ಗಳನ್ನು ಸಹ ಬೇಟೆಯಾಡಿತ್ತು. ಇದು ಇಲ್ಲಿನ ಜನರಲ್ಲಿ ಜೀವ ಭಯವನ್ನುಂಟು ಮಾಡಿತ್ತು.