ಶಿವಮೊಗ್ಗ-ಗಾಂಜಾ ಗುಂಗಿನಲ್ಲಿ ಮೊಮ್ಮಗನಿಂದ ಅಜ್ಜಿಯ ಮರ್ಡರ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಗಾಂಜಾ ನಶೆಯಲ್ಲಿದ್ದ ಮೊಮ್ಮಗನೇ ತನ್ನ ಸ್ವಂತ ಅಜ್ಜಿಯನ್ನು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಗರದ ಆನಂದರಾವ್ ಬಡಾವಣೆಯಲ್ಲಿ ಬುಧವಾರ ನಡೆದಿದೆ.  
ಸುಶೀಲಮ್ಮ (55) ಕೊಲೆಯಾದ ದುರ್ದೈವಿ. ಅಜ್ಜಿಯನ್ನು ಹತ್ಯೆ ಮಾಡಿದ ಆರೋಪಿ ಮೊಮ್ಮಗನನ್ನು ಕಿಶೋರ್ (28) ಎಂದು ಗುರುತಿಸಲಾಗಿದೆ.

ಆರೋಪಿ ಕಿಶೋರ್ ಗಾಂಜಾ ವ್ಯಸನಿ ಯಾಗಿದ್ದು, ಈ ಹಿಂದೆ ಗಾಂಜಾ ಪೆಡ್ಲಿಂಗ್ (ಮಾರಾಟ) ಹಾಗೂ ಗಾಂಜಾ ಸೇವನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಗಾಂಜಾ ನಶೆಯಲ್ಲಿ ಈತ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇಂದು ಕೂಡ ಎಂದಿನಂತೆ ಅಜ್ಜಿ ಸುಶೀಲಮ್ಮ ಜೊತೆ ಜೋರಾಗಿ ಜಗಳವಾಡಿದ್ದಾನೆ. ಇದರಿಂದ ಬೇಸತ್ತ ಅಜ್ಜಿ, ಮೊಮ್ಮಗನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ.

ಇದರಿಂದ ಆಕ್ರೋಶಗೊಂಡ ಕಿಶೋರ್, ಅಜ್ಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದು ಜೋರಾಗಿ ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಸುಶೀಲಮ್ಮ ಕೆಳಗೆ ಬೀಳುತ್ತಿದ್ದಂತೆ, ರಸ್ತೆಯಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿ ಅವರ ತಲೆಯ ಮೇಲೆ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್‌ಪಿ ಬಿ. ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸುಶೀಲಮ್ಮ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಕಿಶೋರ್ ಪತ್ತೆಗಾಗಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು