ವಿಜಯ ಸಂಘರ್ಷ
ಭದ್ರಾವತಿ: ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿರುವ ಜನರಿಗಾಗಿ ಭದ್ರಾ ಜಲಾಶಯದಿಂದ 1 ಟಿಎಂಸಿ(11,574 ಕ್ಯೂಸೆಕ್ಸ್) ನೀರು ಇಂದಿನಿಂದಲೇ ಹರಿಸಲಾಗುತ್ತದೆ.
ತುಂಗಭದ್ರಾ ನದಿ ದಂಡೆಯಲ್ಲಿರುವ ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಮೇ 22ರ ರಾತ್ರಿಯಿಂದ ಮೇ.28ರ ವರೆಗೆ ಪ್ರತಿ ದಿನ ತಲಾ 2 ಸಾವಿರ ಕ್ಯೂಸೆಕ್ಸ್ ನಂತೆ ಕಡೇ ದಿನ 1574 ಕ್ಯೂಸೆಕ್ ಮಾತ್ರ ಹರಿಸಲಾಗುತ್ತದೆ. ಒಟ್ಟು 11,574 ಕ್ಯೂಸೆಕ್ (1ಟಿಎಂಸಿ) ಹರಿಸಲಾಗುತ್ತದೆ.
ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲಿ, ಇತರೆ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ರೈತರು ನದಿ ದಂಡೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳಿಂದ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.