ವಿಜಯ ಸಂಘರ್ಷ
ಕೆ.ಆರ್. ಪೇಟೆ: ಪುಟ್ಟ ಮಕ್ಕಳಿಗೆ ಪ್ರಾರಂಭದ ಹಂತದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿ ಯನ್ನು ಮೈಗೂಡಿಸಿಕೊಂಡ ಮಕ್ಕಳ ಜೀವನದ ಭವಿಷ್ಯ ಉಜ್ವಲ ವಾಗಿರುತ್ತದೆ ಎಂದು ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ ಜೆ.ಎನ್ ರಾಮಕೃಷ್ಣೇಗೌಡಅಭಿಪ್ರಾಯಪಟ್ಟರು.
ತಾಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಎಜುಕೇಶನ್ ಸೆಂಟರ್ ಆವರಣ ದಲ್ಲಿ ಏರ್ಪಡಿಸಿದ ಪುಟಾಣಿ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಂತಹ ಸಮಸ್ಯೆ ಎದುರಾದರೂ ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಈ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವಂತೆ ಮಾಡಬೇಕು. ದೇವರ ಮೇಲೆ ಭಕ್ತಿ ಭಾವದಿಂದ ಪ್ರಾರ್ಥಿಸಿ ಅಕ್ಷರ ಅಭ್ಯಾಸ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಇತಿಹಾಸವಿದೆ ಹಲವರು ಶೃಂಗೇರಿ ಶಾರದಾ ದೇವಾಲಯಕ್ಕೆ ತೆರಳಿ ಪ್ರಥಮ ಅಕ್ಷರ ಬರೆಸಿಕೊಂಡು ಬಂದು ಶಾಲೆ ಸೇರಿಸುವುದನ್ನು ವಾಡಿಕೆ ಇದೆ. ಓದುವ ಸ್ಥಳದಲ್ಲೇ ಸಂಸ್ಕಾರ ಸಂಸ್ಕೃತಿ ಧಾರ್ಮಿಕ ಪೂಜೆ ಪುರಸ್ಕಾರದೊಂದಿಗೆ ಅಕ್ಷರ ಅಭ್ಯಾಸ ಮಾಡಿಸಿದರೆ ಸಂಸ್ಕೃತಿ ಮತ್ತು ಗುಣಮಟ್ಟ ಶಿಕ್ಷಣವನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿ ಕೊಳ್ಳಿ ಎನ್ನುವ ಮನೋಭಾವನೆ ಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕ್ಕಳು ಆಗಮಿಸುವ ಮೊದಲ ದಿನವೇ ರೂಪಿಸಿದ್ದೇವೆ ಎಂದರು.
ಹಿರಿಯ ಪತ್ರಕರ್ತ ಹರಿಚರಣ ತಿಲಕ್ ಮಾತನಾಡಿ ಬಿಜಿಎಸ್ ಶಿಕ್ಷಣ ಸಂಸ್ಥೆ ಎಂದರೆ ಮೊದಲಿಗೆ ನೆನಪಾಗುವುದೇ ಗುಣಮಟ್ಟದ ಶಿಕ್ಷಣದ ಜೊತೆಗೆ ಒಂದು ವಿಶೇಷ ಸಂಸ್ಕಾರ ಸಂಸ್ಕೃತಿ ಧಾರ್ಮಿಕ ಕಾರ್ಯಕ್ರಮಗಳ ತುಂಬಿರುವ ಕಣಜ ಆ ಮಾದರಿಯಲ್ಲೇ ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲ ದಲ್ಲಿ ಮರಳಿನ ಮೇಲೆ ಹಾಗೂ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡುತ್ತಿದ್ದರು. ದೇಶ ಅಮೃತ ಮಹೋತ್ಸವ ಆಚರಣೆ ಮಾಡುವಂತಹ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ. ಜಗತ್ತು ನಿಂತಿರುವುದು ಅಕ್ಷರದಿಂದ ಆದಿ, ಅಂತ್ಯ ಯಾವುದಕ್ಕೆ ಇಲ್ಲವೋ ಅದು ಅಕ್ಷರವಾಗಿದೆ. ಈ ಜಗತ್ತು ಅಕ್ಷರದಿಂದ ಜಗತ್ತು ಉಗಮವಾಗಿದೆ. ಕಣ್ಣಿಗೆ ಕಾಣುವ ಸಕಲ ಜೀವರಾಶಿ ಗಳಲ್ಲೂ ಅಕ್ಷರ ಅಡಕವಾಗಿದೆ ಅನ್ನ ಕೊಡುವ ಯಾವುದೇ ವಿದ್ಯೆಯನ್ನು ಕಲಿಯಲು ಅಕ್ಷರ ಬೇಕು. ಅದು ಸುಲಭವಾಗಿ ಧಕ್ಕುವುದಿಲ್ಲ. ಸಾಕಷ್ಟು ಅಭ್ಯಾಸ ಮಾಡಬೇಕು ಮಕ್ಕಳಿಗೆ ಇದು ಸಂಭ್ರಮದ ದಿನ. ಮಕ್ಕಳು ಆರಂಭ ದಲ್ಲಿ ತಮ್ಮ ತಂದೆ ತಾಯಿಗಳಿಂದ ಅಕ್ಷರಾಭ್ಯಾಸವನ್ನು ಪ್ರಾರಂಭಿಸುತ್ತಾರೆ. ಮಕ್ಕಳಿಗೆ ಯಾರೇ ಶಿಕ್ಷಣ ಕಲಿಸಿದರೂ, ಮೊದಲು ತಾಯಿಯಿಂದ ಕಲಿಯು ವಂತಹ ಶಿಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದರು.
ಬಳಿಕ ಮಾತನಾಡಿದ ಗ್ರಾ.ಪಂ ಸದಸ್ಯ ಹಾಗೂ ಪತ್ರಕರ್ತ ಶ್ರೀನಿವಾಸ್ ಸಜ್ಜನ್ ಸಮಾಜದ ಸತ್ಪಜೆಗಳನ್ನಾಗಿ ರೂಪಿಸುತ್ತಿದ್ದರು. ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ, ವಿದ್ಯಾರ್ಥಿ ದಿಸೆಯಲ್ಲಿಯೇ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶದ ಭದ್ರ ಬುನಾದಿಗೆ ಹಗಲಿರುಳು ಶ್ರಮಿಸ ಬೇಕು.ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಬಿಜಿಎಸ್ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿದಾರಿಗೆ ತಂದು ಸತ್ಪಜೆಗಳನಾಗಿ ರೂಪಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಷರ ಅಭ್ಯಾಸ ಪೂಜಾ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಪುಟ್ಟ ಮಕ್ಕಳು ತಮ್ಮ ಪೋಷಕರ ಜೊತೆ ಪಾಲ್ಗೊಂಡಿದ್ದರು. ಶ್ರೀ ಸರಸ್ವತಿಯ ಐದು ಅವತಾರಗಳ ವೇಷಭೂಷಣ ಧರಿಸಿ ವೇದಿಕೆಗೆ ಮೆರವ ತುಂಬಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ಕೆ.ಆರ್ ನೀಲಕಂಠ, ಮಂಜುನಾಥ್ ಶಾಸ್ತ್ರಿ , ಕಲಿಲ್,ವಿ ಲೋಕೇಶ್, ರಾಜು,ಹೇಮಗಿರಿ ಬಿಜಿಎಸ್ ಶಾಲಾ ಪ್ರಾಂಶುಪಾಲ ಆನಂದ್, ಶಿಕ್ಷಕ ವೃಂದ ಸೇರಿದಂತೆ ಉಪಸ್ಥಿತರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)