ವಿಜಯ ಸಂಘರ್ಷ
ಶಿವಮೊಗ್ಗ: ಪುರಾತನ ಕಲೆಗಳಲ್ಲಿ ಒಂದಾದ ಜಾದು ಕಲೆಯು ಅಳಿವಿ ನಂಚಿನಲ್ಲಿದ್ದು, ಜಾದು ಕಲೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಜಾದುಗಾರ್ ಪ್ರಶಾಂತ್ ಎಸ್.ಹೆಗಡೆ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾವಿದರಿಗೆ ಹಾಗೂ ವಿಶೇಷವಾಗಿ ಜಾದು ಕಲೆಗೆ ಸರ್ಕಾರ, ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ತಿಳಿಸಿದರು.
ಮೊಬೈಲ್ ಹಾವಳಿಯಿಂದ ಎಲ್ಲ ಕಲೆಗಳಿಗೂ ಕಂಟಕ ಎದುರಾಗಿದ್ದು, ಎಲ್ಲರಲ್ಲೂ ಆಸಕ್ತಿ ಕಡಿಮೆಯಾಗಿದೆ. ಕಲಿಯುವ ಆಸಕ್ತಿಯು ಇಲ್ಲ. ಆದರೆ ನಾನು ಜಾದು ಕಲೆಯನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದ್ದೇನೆ ಎಂದರು.
ಬಾಲ್ಯದಿಂದಲೇ ಜಾದು ಕಲೆಯನ್ನು ಅಭ್ಯಾಸ ಮಾಡುತ್ತ ವೃತ್ತಿ ಜೀವನವನ್ನು ಮುಡು ಪಾಗಿಟ್ಟು ಇಂದಿಗೂ ಸಹ ಮಾಯಾ ಲೋಕದಲ್ಲಿ ಸೇವೆಯನ್ನು ಅನೇಕ ಜನರು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ನಮ್ಮ ರೋಟರಿ ಸಂಸ್ಥೆ ಸಾಧಕರನ್ನು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ. ಕಲಾವಿದರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಬೇಕು. ಜಾದುಗಾರ್ ಪ್ರಶಾಂತ್ ಹೆಗಡೆ ಅವರ ಕಲಾಸೇವೆ ಅವೀರಸ್ಮರಣೀಯ ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ.ಗುಡದಪ್ಪ ಕಸಬಿ, ಮಾಜಿ ಅಧ್ಯಕ್ಷ ಕೆ.ಜಿ.ರಾಮಚಂದ್ರರಾವ್, ವಸಂತ ಹೋಬಳಿದಾರ್, ಅರುಣ್ ದೀಕ್ಷಿತ್, ಡಾ. ಧನಂಜಯ, ಕಾರ್ಯದರ್ಶಿ ಕಿಶೋರ್, ಶಶಿಕಾಂತ್ ನಾಡಿಗ್, ಮಂಜುನಾಥ್, ಸಂತೋಷ್, ಶಂಕರ ಸರ್ಜಿ, ಶೇಷಗಿರಿ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಹಾಗೂ ರೋಟರಿ ಸದಸ್ಯರು ಇದ್ದರು.
ಇದೇ ವೇಳೆ ಜಾದುಗಾರ್ ಪ್ರಶಾಂತ್ ಎಸ್.ಹೆಗಡೆ ಅದ್ಭುತ ಜಾದು ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು.