ವಿಜಯ ಸಂಘರ್ಷ
ಶಿವಮೊಗ್ಗ: ಬಿಜೆಪಿ ಶಕ್ತಿ ಕೇಂದ್ರವಾದ ಮಲೆನಾಡಿನಲ್ಲಿ ಬಿಜೆಪಿ ತನ್ನ ಪಾರುಪತ್ಯೆ ಕಾಯ್ದುಕೊಂಡಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರ ಎರಡನೇ ಪ್ರಯತ್ನವೂ ಕೈಗೂಡಲಿಲ್ಲ.
ಚುನಾವಣೆಯಲ್ಲಿ ಆಡಳಿತ ಈ ಗ್ಯಾರಂಟಿಗಳು ಹಾಗೂ ಸೋದರ ಮಧುಬಂಗಾರಪ್ಪ ಅವರ ಬೆಂಗಾವಲಿದ್ದರೂ ಗೀತಾ ಅವರ
ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರದಲ್ಲಿರುವ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಗೆಲುವು ಅತ್ಯಂತ ಪ್ರತಿಷ್ಠೆಯಾಗಿತ್ತು.
ಫಲಿಸದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ: ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ ಕುಮಾರ್ ಒಬ್ಬ ಸ್ಟಾರ್ ನಟರಾಗಿ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಚುನಾವಣೆ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಫಲಾನುಭವಿಗಳು ಮತ್ತು ಮತದಾರರನ್ನು, ತಲುಪಲು ಸಾಧ್ಯವಾಗಲಿಲ್ಲ. ಶಿವರಾಜ್ ಕುಮಾರ್ ಅವರು ಚುನಾವಣೆ ಘನತೆಗೆ ಎಲ್ಲೂ ಧಕ್ಕೆಯಾಗದಂತೆ ಪ್ರಚಾರ ಮಾಡಿದ್ದರು. ಶಿವಮೊಗ್ಗ ಕ್ಷೇತ್ರದ ಜನರಿಗೆ ನ್ಯಾಯ ಕೊಡುವ ಸಮರ್ಥ ಪತ್ನಿ ಗೀತಾ ಅವರಿಗೆ ಒಂದು ಅವಕಾಶ ಕೊಡಿ ಎಂದು ಪ್ರತಿ ಹಳ್ಳಿಯಲ್ಲೂ ಕೇಳಿದ್ದರು. ಆದರೆ ಒಬ್ಬ ಜನಪ್ರಿಯ ಕಲಾವಿದರಾಗಿ ಅವರು ಪ್ರತಿಸ್ಪರ್ಧಿಗಳ ಬಗ್ಗೆ ಎಲ್ಲೂ ಹಗುರವಾಗಿ ಮಾತನಾಡಲಿಲ್ಲ. ಶಿವಣ್ಣ ಹೋದ ಕಡೆಯೆಲ್ಲಾ ಸೇರುತ್ತಿದ್ದ ಜನ ಜಂಗುಳಿ ಈ ಬಾರಿ ಗೀತಾ ಅವರಿಗೆ ಗೆಲುವಿನ ಉಡುಗೊರೆ ಕೊಡಲಿದೆ ಎಂದೇ ಭಾವಿಸ ಲಾಗಿತ್ತು. ಆದರೆ ನೆಚ್ಚಿನ ನಾಯಕನನ್ನು ನೋಡಿ ಸಂಭ್ರಮಿಸಿ ಸೆಲ್ವಿ ಕ್ಲಿಕ್ಕಿಸಿಕೊಂಡ ಜನ ಮತ ನೀಡದೇ ಹೋದರು.
ಫಲಕೊಟ್ಟ ತಂತ್ರಗಾರಿಕೆ: ಬಿ.ವೈ.ರಾಘವೇಂದ್ರ ಅವರಿಗೆ ಅಭಿವೃದ್ಧಿ ಕೆಲಸಗಳು ಬೆನ್ನಿಗಿದ್ದರೂ ಈ ಚುನಾವಣೆಯಲ್ಲಿ ಸಾಕಷ್ಟು ಪ್ರಯಾಸ ಪಟ್ಟಿದ್ದು ಮಾತ್ರವಲ್ಲದೆ ಉತ್ತಮ ತಂತ್ರಗಾರಿಕೆ ಯನ್ನು ಮೆರೆದಿದ್ದರು. ಬಿಜೆಪಿಯ ಎಲ್ಲಾ ನಾಯಕರನ್ನೂ ವಿಶ್ವಾಸಕ್ಕೆ ಪಡೆದಿದ್ದ ಅವರು, ಜೆಡಿಎಸ್‌ನ ಸಣ್ಣಪುಟ್ಟ ಮುಖಂಡರೊಂದಿಗೂ ಸಮನ್ವತೆ ಸಾಧಿಸಿದ್ದರು. ಕೆ.ಎಸ್.ಈಶ್ವರಪ್ಪ ಅವರು ತಮ್ಮ ಕುಟುಂಬದ ರಾಜಕೀಯದ ಬಗ್ಗೆ ಎಷ್ಟೇ ಟೀಕೆ ಮಾಡಿದರೂ ಎಲ್ಲಿಯೂ ಅವರನ್ನು ಕಟುಮಾತಿಂದ ಟೀಕಿಸಿಲ್ಲ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ, ಶಿವಣ್ಣರ ಬಗ್ಗೆ ಎಲ್ಲಿಯೂ ಕೊಂಕು ಮಾತನಾಡಲಿಲ್ಲ. ಸಮರಕಾಲದಲ್ಲಿ ಎಲ್ಲಿಯೂ ಆವೇಶಕ್ಕೊಳ ಗಾಗದೆ ಸಮಚಿತ್ತ ದಿಂದ ಚುನಾವಣೆ ಎದುರಿಸಿ ತಂತ್ರಗಾರಿಕೆಯಲ್ಲಿಯೇ ಗೆಲುವಿನ ದಡ ಸೇರಿದ್ದಾರೆ.ಮತದಾನದ ದಿನ ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ಪತ್ರಿಕಾ ತುಣುಕು ಸೃಷ್ಟಿ ಮತ್ತು ಹಳೆಯ ವಿಡಿಯೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರುವ ಆರೋಪ ರಾಘವೇಂದ್ರ ಅವರ ಮೇಲೆ ಬಂದಿದ್ದರ ಹೊರತಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಿದ ತಂತ್ರಗಾರಿಕೆ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ಸು ಕಂಡಿದೆ.