ಸ್ಟಾರ್ಟ್ ಅಪ್ ಗಳಲ್ಲಿದೆ ಯುವಜನರಿಗೆ ವಿಫುಲ ಅವಕಾಶಗಳು

ವಿಜಯ ಸಂಘರ್ಷ 
ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ವನ್ನು ಕಾಲೇಜಿನ ವಜ್ರಮಹೋತ್ಸವ ಭವನದ ಸಿ.ಎನ್.ಆರ್. ರಾವ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಜೈವಿಕ ತಂತ್ರಜ್ಞಾನ ವಿಭಾಗದ ‘ಆವಿಷ್ಕಾರ್’ ಫೋರಂ ವತಿಯಿಂದ ನಡೆದ ಕಾರ್ಯಕ್ರಮ ವನ್ನು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಹಾಗೂ ಅನ್ವೇಷಣ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಷನ್ ಸೆಂಟರ್ ಸಹಯೋಗ ದೊಂದಿಗೆ ಆಯೋಜಿಸಲಾಗಿತ್ತು. 

ಅನ್ವೇಷಣ ಸಂಸ್ಥೆಯ ಮುಖ್ಯಸ್ಥ ಹರೀಶ್ ಗದಗಿನ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಮಲೆನಾಡು ವಿಭಾಗದಲ್ಲಿ ಕ್ರಿಯಾಶೀಲ ಯುವಜನರಿಗೆ ಉದ್ಯಮಿ ಗಳಾಗಲು ಸ್ಟಾರ್ಟ್ ಅಪ್ ಗಳು ಉತ್ತಮ ಅವಕಾಶಗಳನ್ನು ಒದಗಿಸುತ್ತಿವೆ, ಈ ಉದ್ಯಮಗಳಿಗೆ ಬೇಕಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡುವುದರ ಮೂಲಕ ಅನ್ವೇಷಣ ಸಂಸ್ಥೆ ಭವಿಷ್ಯದ ಯುವ ಉದ್ಯಮಿಗಳಿಗೆ ಸೂಕ್ತ ವೇದಿಕೆ ಒದಗಿಸುತ್ತಿದೆ ಎಂದು ತಿಳಿಸಿದರು. ವಿಶೇಷವಾಗಿ ಕೃಷಿ, ಜೀವ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರ ಗಳಲ್ಲಿ ಹೊಸ ಉದ್ಯಮ ಚಿಂತನೆಗಳ ಅವಶ್ಯಕತೆ ಇದ್ದು ಈ ಕ್ಷೇತ್ರಗಳಲ್ಲಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಂತಹ ಸ್ಟಾರ್ಟ್ ಅಪ್ ಗಳು ಸಹಾಯಕ ವಾಗಲಿವೆ ಎಂದರು. 

ರೋಟರಿ ಕ್ಲಬ್ ಮಲೆನಾಡು ಅಧ್ಯಕ್ಷ ರೊ.ಮುಸ್ತಾಕ್ ಅಲಿಶಾ ತಾವೂ ಸಹ ಈ ಕಾಲೇಜಿನ ಹಳೇ ವಿದ್ಯಾರ್ಥಿ ಯಾಗಿದ್ದನ್ನು ನೆನೆದು ಪ್ರಸ್ತುತ ದಿನಗಳಲ್ಲಿ ಯುವಜನತೆಯ ಮುಂದೆ ಹೊಸ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಈ ಕುರಿತು ಜಾಗೃತಿಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಈ ಕಾಲೇಜಿನಲ್ಲಿ ಆಯೋಜಿಸುವುದಾಗಿ ತಿಳಿಸಿದರು. 

ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪ್ರಭಾಕರ್ ಮಾತನಾಡಿ ‘ಆವಿಷ್ಕಾರ್’ ಫೋರಂ ಮೂಲಕ ಇಂತಹ ಹಲವಾರು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಆಯೋಜಿಲಾಗುತ್ತಿದ್ದು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು. 

ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ವಿಭಾಗದ ಸಂಯೋಜನಾಧಿಕಾರಿ ಡಾ.ಪ್ರದೀಪ್, ಉಪನ್ಯಾಸಕ ವರ್ಗದವರು, ಕ್ಲಬ್ ಸದಸ್ಯರಾದ ರಶ್ಮಿ ಹಾಗೂ ಮಮತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು