ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ ಆಗಿ ಅರಣ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ನೌಕರನ ವಿರುದ್ಧ ಸುಳ್ಳು ವರದಿ ನೀಡಿ ಕರ್ತವ್ಯ ದಿಂದ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ದಲಿತ ನೌಕರ ರಾಮು ದೊಡ್ಮನೆ ಮಾವಿನಕೆರೆ ವಲಯದಲ್ಲಿ 8 ವರ್ಷ ಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಲಯ ಅಧಿಕಾರಿ ಜಗದೀಶ್ ತಾಲ್ಲೂಕಿನ ಗುಡಮಘಟ್ಟ ಗ್ರಾಮದ ಸರ್ವೆ ನಂ.43ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ರೈತರು ಅಕ್ರಮ ವಾಗಿ ಸಾಗುವಳಿ ಮಾಡಿದ್ದು, ಖುದ್ದಾಗಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಮು ಅವರಿಗೆ ಆದೇಶಿಸಿದ್ದರು. ರಾಮು ಸ್ಥಳಕ್ಕೆ ತೆರಳಿ ಸರ್ವೆ ನಡೆಸಿ, ಪ್ರಾಮಾಣಿಕವಾಗಿ ವರದಿ ಸಲ್ಲಿಸಿದ್ದರು. ಆದರೆ, ಜಗದೀಶ್, ರಾಮು ಅವರ ವಿರುದ್ಧ ಅರಣ್ಯ ಸುಳ್ಳು ವರದಿ ನೀಡಿರುವುದಾಗಿ ಹೇಳಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದು ಖಂಡನೀಯ ಎಂದು ಪ್ರತಿಭಟನ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಗದೀಶ್ ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಈ ರೀತಿ ಮಾಡಿದ್ದು, ಅಮಾನತು ಆದೇಶ ಪತ್ರ ಬಂದ ನಂತರ ಅನಾರೋಗ್ಯದ ನೆಪ ಹೇಳಿಕೊಂಡು ಜಗದೀಶ್ ರಜೆ ಹಾಕಿ ತೆರಳಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದರು.
ರಾಮು ಅವರ ಅಮಾನತು ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ತಕ್ಷಣ ಅವರನ್ನು ಕರ್ತವ್ಯಕ್ಕೆ ಸೇರ್ಪಡೆ ಮಾಡಿ ಕೊಳ್ಳಬೇಕು. ಜಗದೀಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಸಿ. ಜಯಪ್ಪ, ಈಶ್ವರಪ್ಪ, ಮಣಿ ಜಿಂಕ್‌ಲೈನ್, ಪರಮೇಶ್ವರಪ್ಪ, ಎನ್. ಗೋವಿಂದ, ಸಂದೀಪ್, ಸುರೇಶ್ (ಕೂಡ್ಲಿಗೆರೆ), ಎನ್. ಪ್ರಸನ್ನಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Tags:
ಭದ್ರಾವತಿ ದಸಂಸ ಪ್ರತಿಭಟನೆ