ಸಂಸ್ಥೆಗಳು ಸದೃಢವಾಗಲು ಸಂಘಟನೆ ಮುಖ್ಯ: ಎಸ್.ರುದ್ರೇಗೌಡ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಸಂಸ್ಥೆಗಳು ಸದೃಢವಾಗ ಬೇಕಾದರೆ ಸಂಘಟನೆ ಮುಖ್ಯ. ಸಂಸ್ಥೆ ಗಳಲ್ಲಿ ಕ್ರಿಯಾಶೀಲತೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆ, ಮುಂದಿನ ದೃಷ್ಟಿಕೋನ ಮುಖ್ಯ ಎಂದು ಶಾಂತಲಾ ಗ್ರೂಪ್ ಇಂಡಸ್ಟ್ರಿ ಚೇರ್ಮನ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಮಾಚೇನಹಳ್ಳಿ ಕೈಗಾರಿಕಾ ಅಸೋಸಿ ಯೇಷನ್ ನೂತನ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ಈಗಾಗಲೇ ಕೈಗಾರಿಕೆಗಳಿಗೆ ಪೂರಕವಾದ ಹಾಗೂ ಕಾರ್ಮಿಕರಿಗೆ ಮತ್ತು ಸದಸ್ಯರಿಗೆ ಬೇಕಾದ ಅಗತ್ಯ ವಾದ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಅಸೋಸಿಯೇಷನ್ ವತಿಯಿಂದ ಕೈಗಾರಿಕಾ ಸುರಕ್ಷತೆ ಬಗ್ಗೆ ಅಗತ್ಯವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಅವರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿಗಳನ್ನು ಸಹ ನೀಡುತ್ತಿದೆ. ಇದರಿಂದ ಸದಸ್ಯರ ಹಾಗೂ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ಆಗುತ್ತಿದೆ. ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿ ಕೊಂಡು ರಸ್ತೆ, ನೀರು ಹಾಗೂ ಲೈಟ್, ಮೂಲಭೂತ ಸೌಕರ್ಯ ಉತ್ತಮ ಗೊಳಿಸುವುದರ ಮೂಲಕ ಕೈಗಾರಿಕಾ ವಸಹಾತು ರಾಜ್ಯದಲ್ಲಿ ಮಾದರಿಯಾಗಿ ಅಭಿವೃದ್ಧಿಯಾಗಬೇಕು ಎಂದರು.

ಮಾಜಿ ಅಧ್ಯಕ್ಷ ಎಂ.ರಾಜು ಮಾಚೇನ ಹಳ್ಳಿ ಕೈಗಾರಿಕಾ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಆ ಸಂಸ್ಥೆಗೆ ದುಡಿದ ಹಲವಾರು ಮಾಜಿ ಅಧ್ಯಕ್ಷರ ಸಾಧನೆ ಮತ್ತು ಶ್ರಮದ ಬಗ್ಗೆ ವಿವರಿಸಿ, ಸಂಸ್ಥೆ ಯಿಂದ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಆಗುವುದು ಬಾಕಿ ಇದೆ. ಅವೆಲ್ಲವೂ ಸಕಾಲದಲ್ಲಿ ನೆರವೇರ ಬೇಕು ಎಂದರು.

ಮಾಜಿ ಅಧ್ಯಕ್ಷ ರಮೇಶ ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸವಿಸ್ತಾರ ವಾಗಿ ತಿಳಿಸಿದರು.

ಡಿ.ಜಿ.ಬೆನಕಪ್ಪ ಅವರು ರಮೇಶ್ ಹೆಗಡೆ ಅವರಿಂದ ನೂತನ ತಂಡ ದೊಂದಿಗೆ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಚಂದ್ರಶೇಖರ್ ಎ.ಎಲ್. ಕಾರ್ಯದರ್ಶಿಯಾಗಿ ರಾಜೇಶ್.ಎಸ್.ಟಿ., ಖಜಾಂಚಿಯಾಗಿ ದಿನೇಶ್.ಹೆಚ್.ಎಲ್., ನಿರ್ದೇಶಕರಾಗಿ ನಂದನ್ ಮೂರ್ತಿ, ಸಂಜಯ್ ಪಾಟೀಲ್ ಎಂಜಿ, ಸಂತೋಷ್ ಎಂ, ಸೌರಭ ಡಿಕೆ, ಸುರೇಂದ್ರ ಎನ್., ವಿಶೇಷ ಆಹ್ವಾನಿತರಾಗಿ ಮದಕರ ಜೋಯಿಸ್, ಡಿಎಸ್ ಚಂದ್ರಶೇಖರ್, ಎಸ್ ರುದ್ರೇಗೌಡ, ಎಂ ಹಾಲಪ್ಪ ಅವರು ಅಧಿಕಾರ ವಹಿಸಿಕೊಂಡರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಹೊಸ ಸಮಿತಿಯಿಂದ ಎಲ್ಲ ಮಾಜಿ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ಎ.ಎಂ.ಸುರೇಶ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಖಜಾಂಚಿ ವಿ.ಮನೋಹರ್, ಮಾಜಿ ಅಧ್ಯಕ್ಷ ಎನ್.ಗೋಪಿನಾಥ್, ನಿರ್ದೇಶಕರಾದ ಲಕ್ಷ್ಮೀದೇವಿ ಗೋಪಿನಾಥ್, ಪ್ರದೀಪ್ ಎಲಿ ಶುಭಕೋರಿದರು. ಡಿ.ಎಂ.ಶಂಕರಪ್ಪ, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು