ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಯುವಜನರಲ್ಲಿ ಏಡ್ಸ್ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು ಆತಂಕದ ವಿಷಯವಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಸುಶೀಲ ಭಾಯಿ ಹೇಳಿದರು.
ಅವರು ನಗರದ ಬೊಮ್ಮನಕಟ್ಟೆಯ ಸರ್.ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಎನ್'ಎಸ್'ಎಸ್ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಏಡ್ಸ್ ನಿರ್ಮೂಲನೆ ಯಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತು ರಕ್ತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಏರಿಕೆ ಯಾಗುತ್ತಿರುವ ಏಡ್ಸ್ ಸೋಂಕಿನ ಪ್ರಮಾಣದ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ ಎಂದರು.
ಎಚ್ಐವಿ ಸೋಂಕಿತರ ಪ್ರಮಾಣ ನಿರಂತರ ವಾಗಿ ಹೆಚ್ಚಾಗುತ್ತಿರುವುದು ಅಂಕಿ ಅಂಶಗಳ ಮೂಲಕ ತಿಳಿಯುತ್ತಿದ್ದು, ಇದರಲ್ಲಿ ಯುವಜನರ ಪ್ರಮಾಣವೇ ಹೆಚ್ಚಾಗಿರುವುದು ಗಂಭೀರವಾದ ವಿಷಯವಾಗಿದೆ. ಏಡ್ಸ್ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಅಸಾಧ್ಯ. ಆದರೆ, ಅದು ಬಾರದಂತೆ ತಡೆಗಟ್ಟುವಲ್ಲಿ ಎಲ್ಲರೂ ಜಾಗೃತಿಯನ್ನು ವಹಿಸುವ ಅಗತ್ಯತೆ ಇದೆ ಎಂದರು.
ಎಚ್'ಐವಿ ನಿಯಂತ್ರಣದ ಜಾಗೃತಿಯ ಕಾರ್ಯದಲ್ಲಿ ಯುವಜನತೆ ಮುಂದಾಗ ಬೇಕಿದೆ. ಈ ನಿಟ್ಟಿನಲ್ಲಿ ಎನ್'ಎಸ್'ಎಸ್ ಸ್ವಯಂಸೇವಕರ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಐಸಿಟಿಸಿಯ ಆಪ್ತ ಸಮಾಲೋಚಕ ಎಂ.ಲತೇಶ್ ಕುಮಾರ್ ರಕ್ತದಾನದ ಮಹತ್ವ ಮತ್ತು ಏಡ್ಸ್ ತಡೆಗಟ್ಟುವ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಘುನಾಥ ಎಚ್.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಘಟಕದ ಸಂಚಾಲಕ ಡಾ.ಅರಸಯ್ಯ, ಐಕ್ಯುಎಸಿ ಸಂಚಾಲಕ ರಾದ ಡಾ.ಸಿದ್ದೇಗೌಡ ಹಾಗೂ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಜೆ. ಪೂಜಾ ಸ್ವಾಗತಿಸಿ, ಟಿ ಪೂಜಾ ವಂದಿಸಿದರೆ, ಪ್ರಜ್ಞಾ ಮೇರಿ ಜಾಯಿಸ್ ನಿರೂಪಿಸಿದರು.
Tags:
ಭದ್ರಾವತಿ ಸುದ್ದಿ