ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಸರಗಳ್ಳರ ಹಾವಳಿ ಹೆಚ್ಚಾಗಿದೆ ಎಂದು ಮಹಿಳೆಯೋರ್ವ ರಲ್ಲಿ ಭೀತಿ ಮೂಡಿಸಿದ ನಕಲಿ ಪೊಲೀಸರಿಬ್ಬರು, ಚಾಕಚಕ್ಯತೆಯಿಂದ ಮಾಂಗಲ್ಯ ಸರ ಅಪಹರಿಸಿ ಪರಾರಿ ಯಾದ ಘಟನೆ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.ಎಮ್ಮೆಹಟ್ಟಿ ಗ್ರಾಮದ ನಿವಾಸಿಯಾದ ಮಂಜುಳ ಬಾಯಿ (62) ಎಂಬುವರೇ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಗೃಹೋಪಯೋಗಿ ವಸ್ತುಗಳ ಖರೀದಿ ಗಾಗಿ ಮಹಿಳೆಯು, ಹೊಳೆಹೊನ್ನೂರು ಪೇಟೆ ಬೀದಿಗೆ ಆಗಮಿಸಿದ್ದರು. ಈ ವೇಳೆ ಇಬ್ಬರು ಅಪರಿಚಿತ ವಂಚಕರು ಮಹಿಳೆಗೆ ಎದುರಾಗಿದ್ದಾರೆ. ತಮ್ಮನ್ನು ತಾವು ಪೊಲೀಸರೆಂದು ಪರಿಚಯಿಸಿ ಕೊಂಡಿದ್ದಾರೆ.
ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಿನ್ನೆಯಷ್ಟೆ ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಲಾಗಿದೆ. ನೀವು ಮಾಂಗಲ್ಯ ಸರ ಹಾಕಿಕೊಂಡು ಓಡಾಡಿದರೆ, ನಿಮ್ಮ ಸರವನ್ನು ಕಳ್ಳರು ಅಪಹರಿಸುವ ಸಾಧ್ಯತೆಯಿದೆ ಎಂದೆಲ್ಲ ಹೇಳಿ ಭೀತಿ ಹುಟ್ಟಿಸಿದ್ದಾರೆ.
ತದನಂತರ ಮಹಿಳೆಯಿಂದ ಮಾಂಗಲ್ಯ ಸರವನ್ನು ಪಡೆದುಕೊಂಡ ವಂಚಕರು, ಪೇಪರ್ ವೊಂದರಲ್ಲಿ ಸುತ್ತಿಕೊಟ್ಟಿ ದ್ದಾರೆ. ಮನೆಗೆ ಹೋಗಿ ಹಾಕಿಕೊಳ್ಳು ವಂತೆ ಸೂಚಿಸಿದ್ದಾರೆ. ಮಹಿಳೆಯು ಮನೆಗೆ ತೆರಳಿ ಪೇಪರ್ ತೆರೆದಾಗ, ಅದರಲ್ಲಿ ಕಲ್ಲುಗಳಿರುವುದು ಬೆಳಕಿಗೆ ಬಂದಿದೆ.
ವಂಚನೆಗೊಳಗಾಗಿರುವುದು ತಿಳಿದ ನಂತರ ಮಹಿಳೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕಳುವಾದ ಮಾಂಗಲ್ಯ ಸರವು 30 ಗ್ರಾಂ ತೂಕದ್ದಾಗಿದ್ದು, ಇದರ ಮೌಲ್ಯ 2 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ನಕಲಿ ಪೊಲೀಸರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.